ಮಂಗಳೂರು : ಬಂದರು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೆರ್ ಸ್ವಾಮೀಜಿಯವರು ಭೇಟಿ ನೀಡಿದ ಸನ್ನಿವೇಶ ಜಾತ್ರೆಯ ವೈಭವಕ್ಕೆ ಸಾಕ್ಷಿಯಾಯಿತು.
ಶ್ರೀ ಕ್ಷೇತ್ರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಶ್ರೀಗಳು ಶನಿವಾರ ಸಾಯಂಕಾಲ 6 ಗಂಟೆ ಸುಮಾರಿಗೆ ಆಗಮಿಸಿದರು. ಸಮಸ್ತ ಮಂಗಳೂರಿನ ಜಿಯಸ್‌ಬಿ ಸಮಾಜ ಭಾಂದವರ ಪರವಾಗಿ ಶ್ರೀ ಗಳವರಿಗೆ ಸಕಲ ಬಿರುದಾವಳಿ ಹಾಗೂ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.
ಶ್ರೀಗಳ ಆಗಮನ ಬಳಿಕ ಶ್ರೀ ದೇವಳದ ವಸಂತ ಮಂಟಪದಲ್ಲಿ ಹತ್ತು ಸಮಸ್ತರ ಪರವಾಗಿ ದೇವಳದ ಮೊಕ್ತೇಸರರಿಂದ ಶ್ರೀಗಳವರ ಪಾದ ಪೂಜೆ ನೆರವೇರಿಸಲಾಯಿತು. ಬಳಿಕ ಶ್ರೀಗಳವರಿಂದ ಆಶೀರ್ವಚನ – ಪ್ರವಚನ ಕೈಂಕರ್ಯ ನೆರವೇರಿತು.
ಶ್ರೀ ವೀರ ವೆಂಕಟೇಶ ದೇವರ ರಾತ್ರಿ ಪೂಜೆ ಶ್ರೀ ದೇವರಿಗೆ ಶ್ರೀಗಳವರ ಕರಕಮಲಗಳಿಂದ ಮಹಾ ಮಂಗಳಾರತಿ ನೆರವೇರಿತು ಎಂದು ದೇವಾಲಯದ ಪ್ರಮುಖರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಕೆ.ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ ಸಹಿತ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.