‘ಪುತ್ತೂರು ಘಟನೆಯ ಒಳ ಮರ್ಮ ಗೊತ್ತು, ಕೇಂದ್ರಕ್ಕೆ ತಿಳಿಸುವೆ’ ಎಂದ ಬೆಂಕಿ ಚೆಂಡು..! ಪುತ್ತಿಲ ಟೀಂಗೆ ಯತ್ನಾಳ್ ಬಲ..!?

ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆ ನಂತರ ಕರಾವಳಿಯಲ್ಲಿ ‘ಹಿಂದೂತ್ವ ಮತ್ತು ಬಿಜೆಪಿ’ ನಡುವೆ ಸಂಘರ್ಷ ಭುಗಿಲೆದ್ದಂತಿದೆ. ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಪರ ಭಾರೀ ಜನಮತ ಸಿಕ್ಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರಿನಲ್ಲೇ ಕಮಲ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದು ಕುತೂಹಲಕಾರಿ ಬೆಳವಣಿಗೆಯಾಗಿದೆ.

ಈ ನಡುವೆ, ಅರುಣ್ ಕಮಾರ್ ಪುತ್ತಿಲ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಲ್ಲಿ ಪುತ್ತೂರು ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಬಹುದಿತ್ತು ಎಂಬ ಅಭಿಪ್ರಾಯ ಕೇಳಿಬಂದಿದೆ. ನಳಿನ್ ಕುಮಾರ್ ಕಟೀಲ್ ಬಗ್ಗೆ ಅಸಮಾಧಾನ ಹೊಂದಿದ್ದ ಕಾರಣಕ್ಕಾಗಿ ಪುತ್ತಿಲ ಅವರನ್ನು ದೂರ ಇಡಲಾಗಿತ್ತು ಎಂದು ಆಕ್ರೋಶ ಹೊರಹಾಕುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ರಾಜ್ಯ ನಾಯಕರ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ನಡುವೆ, ಪುತ್ತೂರಿನಲ್ಲಿ ಬಿಜೆಪಿ ಸೋಲಿನ ಬೆನ್ನಲ್ಲೇ ನಳಿನ್ ಕುಮಾರ್ ಹಾಗೂ ಡಿ.ವಿ‌.ಸದಾನಂದ ಗೌಡರ ಭಾವ ಚಿತ್ರಗಳಿಗೆ ಚಪ್ಪಲಿ ಹಾರಹಾಕಿರುವ ಪ್ರಕರಣ ಸಂಬಂಧ ಪೊಲೀಸರು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದು ಚಿತ್ರಹಿಂಸೆ ನೀಡಿದ್ದಾರೆಂಬ ಆರೋಪವು ‘ಹಿಂದೂತ್ವ Vs ಬಿಜೆಪಿ’ ಸಂಘರ್ಷಕ್ಕೆ ಕಾರಣವಾಗಿದೆ.

ಪುತ್ತಿಲ ಟೀಂಗೆ ಯತ್ನಾಳ್ ಅಭಯ..!

ಈ ಮಧ್ಯೆ, ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ಪುತ್ತೂರಿಗೆ ಭೇಟಿ ನೀಡಿದ ಬೆಳವಣಿಗೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಗೆ ಪ್ರತಿಸ್ಪರ್ಧಿಯಾಗಿ ಚುನಾವಣಾ ಅಖಾಡದಲ್ಲಿ ಸೆಣಸಾಡಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಯತ್ನಾಳ್ ಅವರಿಗೆ ಸಾಥ್ ನೀಡಿದ್ದರು. ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಭೇಟಿಯಾದ ಯತ್ನಾಳ್, ಯೋಗಕ್ಷೇಮ ವಿಚಾರಿಸಿದರು. ಈ ಕಾರ್ಯಕರ್ತರ ಪರಿಸ್ಥಿತಿ ಕಂಡು ಮಮ್ಮಲ ಮರುಗಿದ ಯತ್ನಾಳ್, ತಮ್ಮ ವೈಯಕ್ತಿಕ ನೆಲೆಯಲ್ಲಿ ತಲಾ 1 ಲಕ್ಷ ರೂಪಾಯಿ ನೆರವು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪುತ್ತೂರಿನ ಪರಸ್ಥಿತಿ ಕುರಿತಂತೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ಒಳಗಿನ ಸತ್ಯ ನಮಗೆ ಗೊತ್ತಿದೆ. ಎಲ್ಲಿ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸುತ್ತೇನೆ’ ಎಂದರು.‌ ‘ಇದರ ಹಿಂದೆ ಏನಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಘಟನೆ ಪೊಲೀಸ್ ಇಲಾಖೆಗೆ ಗೌರವ ತರುವಂತದ್ದಲ್ಲ. ತಕ್ಷಣ ಡಿವೈಎಸ್‌‌ಪಿ ಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ ಯತ್ನಾಳ್, ಕೇಂದ್ರದ ನಾಯಕರಿಗೆ ಕಾರ್ಯಕರ್ತರ ಭಾವನೆ ಬಗ್ಗೆ ತಿಳಿಸುವುದಾಗಿಯೂ ಹೇಳಿದರು. ‘ನಿಮ್ಮ ಭಾವನೆಗೆ ತಕ್ಕ ನಿರ್ಧಾರವನ್ನು ಕೇಂದ್ರ ತೆಗೆದುಕೊಳ್ಳಲಿದೆ’ ಎಂದು ಅವರು ಪುತ್ತೂರಿನ ಬಿಜೆಪಿ ಕಾರ್ಯಕರ್ತರಿಗೆ ಸಮಾಧಾನ ಹೇಳಿದ ವೈಖರಿಯೂ ಗಮನಸೆಳೆಯಿತು.

Related posts