ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಜಯಶಾಲಿಯಾಗಿರುವ ಕಾಂಗ್ರೆಸ್ ಇದೀಗ ಸರ್ಕಾರ ರಚನೆಯ ಪ್ರಕ್ರಿಯೆಗೆ ಮುನ್ನುಡಿ ಬರೆದಿದೆ. ಇಂದು (ಗುರುವಾರ) ಸಂಜೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಯಿತು.
ನಿಗದಿಯಂತೆ ಸಂಜೆ ಕೆಪಿಸಿಸಿ ಕಚೇರಿ ಇಂದಿರಾ ಗಾಂಧಿ ಭವನದಲ್ಲಿ ಎಐಸಿಸಿ ನಾಯಕರಾದ ಸಶೀಲ್ ಕುಮಾರ್ ಶಿಂದೆ, ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕರೂ ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಉಪಸ್ಥಿತಿಯಲ್ಲಿ ನೂತನ ಕಾಂಗ್ರೆಸ್ ಶಾಸಕರ ಸಭೆ ನಡೆಯಿತು. ಅಷ್ಟೇನೂ ಗಂಭೀರ ಚರ್ಚೆಗಳಿಲ್ಲದೆ ಒಮ್ಮತದ ಅಭಿಪ್ರಾಯದೊಂದಿಗೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆರಿಸಲಾಯಿತು.
ಸಭೆ ಆರಂಭವಾಗುತ್ತಿದ್ದಂತೆಯೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ಪ್ರಸಾಪ ಮುಂದಿಡಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಸಿಎಲ್‌ಪಿ ನಾಯಕನ ಸ್ಥಾನಕ್ಕೆ ಹೆಸರು ಸೂಚಿಸಿದರು. ಅವರು ನೂತನ ಸರ್ಕಾರದ ಮುಖ್ಯಮಂತ್ರಿಯಾಗಬೇಕೆಂಬ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು. ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ್, ಹೆಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ತನ್ವೀರ್ ಸೇಠ್, ಕೆ.ಹೆಚ್.ಮುನಿಯಪ್ಪ ಅವರು ಅನುಮೋದಿಸಿದರು. ಸಿದ್ದರಾಮಯ್ಯ ಅವರನ್ನೇ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
#WATCH | Karnataka | Congress Legislative Party (CLP) meeting underway at the party office in Bengaluru.
(Video: Karnataka Pradesh Congress Committee) pic.twitter.com/bYH6p0X2Dv
— ANI (@ANI) May 18, 2023
ಹೈಕಮಾಂಡ್ ಆಶಯದಂತೆ ಸಿಎಲ್‌ಪಿ ನಾಯಕನ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ಶಾಸಕಾಂಗ ಪಕ್ಷ ಸಭೆಯಲ್ಲಿ ಒಮ್ಮತಾಭಿಪ್ರಾಯದ ನಿರ್ಧಾರ ಮೂಲಕ ಒಗ್ಗಟ್ಟಿನ ಪ್ರದರ್ಶನವಾಯಿತು.