ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ತ್ರಿಸದಸ್ಯ ನೇಮಕಾತಿ ಸಮಿತಿಯು ಶನಿವಾರ ಅವರ ಹೆಸರನ್ನು ಅಂತಿಮಗೊಳಿಸಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷಗಳಿಗೆ ನಿಗದಿಪಡಿಸಿ ಈ ಆದೇಶ ಹೊರಡಿಸಲಾಗಿದೆ.
ಹಿರಿಯ ಐಪಿಎಸ್ ಅಧಿಕಾರಿಗಳಾದ ಮಧ್ಯಪ್ರದೇಶ ಡಿಜಿಪಿ ಸುಧೀರ್ ಸಕ್ಸೇನಾ ಮತ್ತು ದೆಹಲಿಯ ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಮುಖ್ಯಸ್ಥರಾದ ತಾಜ್ ಹಾಸನ್ ಅವರ ಹೆಸರುಗಳು ಕೂಡಾ ಈ ಪಟ್ಟಿಯಲ್ಲಿತ್ತಾದರೂ ಅಂತಿಮವಾಗಿ ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರ ಹುದ್ದೆಗೆ ನೇಮಕ ಮಾಡಲಾಗಿದೆ.