ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ 2023-24ನೇ ಸಾಲಿನ ಕಬ್ಬು ಬೆಳೆಗಾರರಿಗೆ ಎಫ್ಆರ್ಪಿ ದರವನ್ನು ಪ್ರತಿ ಟನ್ ಗೆ 100 ರೂ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಮೋದಿ ಸರ್ಕಾರ 2014-15ನೇ ಸಾಲಿನಲ್ಲಿ ಪ್ರತಿ ಟನ್ ಗೆ 2100 ರೂ. ಇದ್ದ ಎಫ್ಆರ್ಪಿ ದರವನ್ನು ಇಂದು 2023-24ನೇ ಸಾಲಿನಲ್ಲಿ ಟನ್ ಗೆ 3150 ರೂ.ಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ 5 ಕೋಟಿ ಕಬ್ಬು ಬೆಳೆಗಾರರಿಗೆ ಮತ್ತು 5 ಲಕ್ಷ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಇದರಿಂದ ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.
ಗೊಬ್ಬರದ ಬೆಲೆಗಳು ಪ್ರತಿ ವರ್ಷ ಜಾಗತಿಕವಾಗಿ ಬಹುಪಟ್ಟು ಹೆಚ್ಚಾಗುತ್ತಿವೆ. ಆದರೆ ಕೇಂದ್ರ ಸರ್ಕಾರವು ಯೂರಿಯಾ ಸಬ್ಸಿಡಿಯನ್ನು ಹೆಚ್ಚಿಸುವ ಮೂಲಕ ರಸಗೊಬ್ಬರ ಬೆಲೆ ಏರಿಕೆಯಿಂದ ರೈತರನ್ನು ರಕ್ಷಿಸುತ್ತಿದೆ. ರೈತರಿಗಾಗಿ 3 ಲಕ್ಷ 70 ಸಾವಿರ ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಅನ್ನದಾತನ ಬಾಳಿನಲ್ಲಿ ಸಮಗ್ರ ಬದಲಾವಣೆ ತರುವತ್ತ ಹೆಜ್ಜೆ ಹಾಕಿದೆ ಎಂದರು.
ಒಂದು ರಾಜ್ಯ 10 ಲಕ್ಷ ಟನ್ ರಾಸಾಯನಿಕ ಗೊಬ್ಬರ ಉಪಯೋಗಿಸುತ್ತಿದ್ದು ಅದನ್ನು 3 ಲಕ್ಷ ಟನ್ ಗೆ ಇಳಿಸಿದರೆ ಅದರ ಸಬ್ಸಿಡಿ ಉಳಿತಾಯ ಸುಮಾರು 3,000 ಕೋಟಿ ರೂ. ಆಗಲಿದೆ. ಈ ಪೈಕಿ ಶೇ 50 ರಷ್ಟು ಅಂದರೆ 1,500 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಸಂಬಂಧಪಟ್ಟ ರಾಜ್ಯಕ್ಕೆ ನೀಡಲಿದೆ. ಇದನ್ನು ಪರ್ಯಾಯ ಗೊಬ್ಬರ ಮತ್ತು ಇತರೆ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದಾಗಿದೆ ಎಂದರಲ್ಲದೇ ಈ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಹಾಗೂ ಕೇಂದ್ರ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.