‘ಒಂದು ನಿಗಮ ಹತ್ತಾರು ಕಾರ್ಯ..’ KSRTC ಪಾಲಿಗೆ ಸಂಭ್ರಮ.. ನಿಗಮದ ನೌಕರ ವೃಂದಕ್ಕೆ ಬಂಪರ್..

ಬೆಂಗಳೂರು: ರಾಜ್ಯದ ಜನರ ಹೆಮ್ಮೆಯ ರಥ KSRTC ತನ್ನ ಪ್ರಯಾಣಿಕರ ಸೇವೆ ಸುಗಮವಾಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ–2ರ ಆವರಣದಲ್ಲಿ ಮಂಗಳವಾರ ’62ನೇ ಸಂಸ್ಥಾಪನಾ ದಿನಾಚರಣೆ’ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ‌ ಸಚಿವ ರಾಮಲಿಂಗ ರೆಡ್ಡಿ ಅವರು ವಿವಿಧ ಕಾರ್ಯಾಚರಣೆಗಳಿಗೆ ಮುನ್ನುಡಿ ಬರೆದರು.

ಏನಿದು ವಿಶೇಷತೆ ?

ಮೈಸೂರು ರಾಜ್ಯ ಸರ್ಕಾರವು 1948 ರಲ್ಲಿ ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ (ಎಂ.ಜಿ.ಆರ್.ಟಿ.ಡಿ) ಅನ್ನು 100 ವಾಹನಗಳೊಂದಿಗೆ ಪ್ರಾರಂಭಿಸಿತ್ತು. ರಸ್ತೆ ಸಾರಿಗೆ ಸಂಸ್ಥೆಯ ಕಾಯ್ದೆ 1950ರ ಪರಿಚ್ಛೇದ ರೀತ್ಯಾ 1961 ರಲ್ಲಿ ಎಂ.ಜಿ.ಆರ್.ಟಿ.ಡಿ ಸಂಸ್ಥೆಯಾಗಿ ರೂಪಿತವಾಗಿ ಮೈಸೂರು ರಸ್ತೆ ಸಾರಿಗೆ ಸಂಸ್ಥೆ ಎಂದು ಕರೆಯಲ್ಪಟ್ಟಿತು. ನಂತರ 1973 ರಿಂದ ಕೆ.ಎಸ್.ಆರ್.ಟಿ.ಸಿ ಎಂದು ಮರುನಾಮಕರಣ ಮಾಡಲಾಯಿತು. ಸಂಸ್ಥೆಯ ಮೊದಲ ವಾಹನವನ್ನು ಕರಾರಸಾ ನಿಗಮದ ಕೇಂದ್ರ ಕಛೇರಿಯ ಮುಂದೆ ವಾಹನದ ಚರಿತ್ರೆಯ ಕುರುಹಾಗಿ ನಿಲ್ಲಿಸಲಾಗಿರುತ್ತದೆ. ಈ ವಾಹನದ ಸಂಖ್ಯೆ ಎಂವೈಎಫ್‌ 4101 ಆಗಿದ್ದು ಇದನ್ನು ಕೆನಡಾದ ಬೆಡ್‌ಫೋರ್ಡ ಕೋಚ್‌ ಬಾಡಿ ಲಿ., ಕಂಪನಿಯು ನಿರ್ಮಿಸಿತ್ತು. ಪ್ರಥಮವಾಗಿ ಬಿಜಾಪುರದಲ್ಲಿ ಕಾರ್ಯಾಚರಣೆ ಮಾಡಲಾಯಿತು. ಈ ವಾಹನವನ್ನು ಕರಾರಸಾ ನಿಗಮವು ಎಂ.ಜಿ.ಆರ್‌.ಟಿ.ಡಿ ಯಿಂದ 1956 ರಲ್ಲಿ ಖರೀದಿಸಿ ನವೀಕರಿಸಲಾಗಿತ್ತು. ಈ ವಾಹನದ ಕಾರ್ಯಾಚರಣೆ ಹಿಂಪಡೆದ ನಂತರದಲ್ಲಿ ಸಿಬ್ಬಂದಿಯನ್ನು ಸಾಗಿಸಲು ಹಾಗೂ ಸವದತ್ತಿ ಮತ್ತು ಬನಶಂಕರಿ ಜಾತ್ರೆಯ ಸಂದರ್ಭದಲ್ಲಿ ಬಳಸಲಾಗುತ್ತಿದ್ದ ಕಾರಣ ಈ ವಾಹನಕ್ಕೆ “ಶ್ರೀ ಬನಶಂಕರಿ” ಎಂದು ನಾಮಕರಣ ಮಾಡಲಾಗಿದೆ. ಟ್ರಾಕ್ಟರ್‌ ಮಾದರಿಯ ಬನಶಂಕರಿ ಬಸ್‌ ನಿಂದ ಆರಂಭಿಸಿದ ಪ್ರಯಾಣಇದೀಗ ಕೆಎಸ್ಸಾರ್ಟಿಸಿಯ ಪ್ರತಿಷ್ಠೆ ‘ಅಂಬಾರಿ ಉತ್ಸವ’ ಹವಾ ನಿಯಂತ್ರಿತ ಸ್ಲೀಪರ್‌ ಬಸ್‌ ಕಾರ್ಯಾಚರಣೆ ವರೆಗೆ ಬೆಳೆದು ನಿಂತಿದೆ.

KSRTC 62 ನೇ ಸಂಸ್ಥಾಪನಾ ದಿನಾಚರಣೆ

ನಿಗಮದ 62 ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯ ಸಾರಿಗೆ ವ್ಯವಸ್ಥೆಯ ಇತಿಹಾಸವನ್ನು ಮೆಲುಕು ಹಾಕಲಾಯಿತು. ನಿಗಮದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕೆಎಸ್ಸಾರ್ಟಿಸಿ ಇದೀಗ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಸಾರಿಗೆ ಸಂಸ್ಥೆಯೆಂಬ ಹೆಗ್ಗಳಿಕೆಯನ್ನು ಹೊಂದಿದ್ದು ಪ್ರಯಾಣಿಕರಿಗೆ ಸಮರ್ಪಕವಾದ ಸೇವೆಯನ್ನು ಒದಗಿಸುತ್ತಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ವೇಳೆ ಹೊಸ ವಾಹನಗಳನ್ನು ಖರೀದಿಸಲಾಗದ ಪರಿಸ್ಥಿತಿಯಲ್ಲಿದ್ದಾಗ 8 ರಿಂದ 9 ಲಕ್ಷ ಕಿ.ಮಿ. ಕ್ರಮಿಸಿದ ತನ್ನ ಹಳೆಯ ವಾಹನಗಳನ್ನು ಪುನಶ್ಚೇತನಗೊಳಿಸಿ ಸೇವೆ ಮುಂದುವರಿಸಲಾಯಿತು. ಇನ್ನೂ ಆ ವಾಹನಗಳನ್ನು 4-5 ಲಕ್ಷ ಕಿ.ಮಿ.ವರೆಗೆ ಕಾರ್ಯಾಚರಣೆಗೊಳಿಸಲು ಯೋಜನೆಯನ್ನು ರೂಪಿಸಿ, ಹಳೆಯ ವಾಹನಗಳನ್ನು ಹೊಸ ವಾಹನಗಳಂತೆ ಪರಿವರ್ತಿಸಿ ಚಾಲನೆಗೆ ಬಳಸಿಕೊಳ್ಳಲಾಗಿದೆ ಎಂದರು. ಈ ಪ್ರಯತ್ನದಲ್ಲಿ ತೊಡಗಿಸಿಕೊಂಡ ಎಲ್ಲಾ ವ್ಯವಸ್ಥಾಪಕ ನಿರ್ದೇಶಕರುಗಳು, ತಾಂತ್ರಿಕ ಅಧಿಕಾರಿಗಳು ಹಾಗೂ ಕಾರ್ಯಾಗಾರದ ಸಿಬ್ಬಂದಿಯನ್ನು ಅವರು ಅಭಿನಂಧಿಸಿದರು.

ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿ ನಿಗಮಗಳು ತನ್ನ ಎಲ್ಲಾ ಸಂಪ್ಮನೂಲಗಳನ್ನು ಕ್ರೂಢಿಸಿಕೊಂಡು ಜನಸಾಮಾನ್ಯರಿಗೆ ಅಗತ್ಯ ಸೇವೆಗಳನ್ನು ಒದಗಿಸಿ ಸರ್ಕಾರಕ್ಕೆ ಗೌರವ ತಂದಿವೆ ಎಂದು ಕೊಂಡಾಡಿದ ಸಚಿವರು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿನ ಲಭ್ಯವಿರುವ ಅನುಕಂಪಕದ ಅವಲಂಭಿತ ಖಾಲಿ ಹುದ್ದೆಗಳನ್ನು ಯಾವುದೇ ವಿಳಂಭವಿಲ್ಲದೇ ತುಂಬಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದೇ ವೇಳೆ, ನಿಗಮವು 62ನೇ ಸಂಸ್ಥಾಪನಾ ದಿನಾರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇವು ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಲ್ಯಾಣ ಮತ್ತು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದ್ದು, ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುವಲ್ಲಿ ಸಹಕಾರಿಯಾಗಲಿದೆ.

  • ಅಪಘಾತ ಪರಿಹಾರ ನಿಧಿ ಯೋಜನೆಯಡಿ ನೂತನ ಬೊಲೆರೋ ವಾಹನಗಳ ಸೇರ್ಪಡೆ:

ಅಪಘಾತ ಪರಿಹಾರ ನಿಧಿ ಅಡಿಯಲ್ಲಿ, ಅಪಘಾತ ತಡೆಗಟ್ಟಲು ಹಾಗೂ ತ್ವರಿತಗತಿಯಲ್ಲಿ ಅಪಘಾತ ಸ್ಥಳಕ್ಕೆ ಧಾವಿಸಿ ಪರಿಹಾರ ಪ್ರಕ್ರಿಯೆ ಕೈಗೊಳ್ಳಲು ಹಾಗೂ ಅಗತ್ಯತೆಗೆ ಅನುಗುಣವಾಗಿ ಆಸ್ಪತ್ರೆ, ಇತ್ಯಾದಿ ಸ್ಥಳಗಳಿಗೆ ತೆರಳಲು ಪ್ರಯಾಣಿಕರ ಸೇವೆಯ ಹಿತದೃಷ್ಟಿಯಿಂದ 20 ನೂತನ ಬೊಲೆರೋ ವಾಹನಗಳನ್ನು ಸೇರ್ಪಡೆ ಮಾಡಲಾಗಿದೆ.

  •  ಶಕ್ತಿ ಯೋಜನೆಯ ಕುರಿತ ವಿಶೇಷ ಆಂತರಿಕ ನಿಯತಕಾಲಿಕ ಸಾರಿಗೆ ಸಂಪದ ಬಿಡುಗಡೆ:

ನಿಗಮವು ಪ್ರತಿ ಮೂರು ತಿಂಗಳಿಗೊಮ್ಮೆ ನಿಗಮದ ಚಟುವಟಿಕೆಗಳ ಕುರಿತು ಆಂತರಿಕ ನಿಯತಕಾಲಿಕ ಸಾರಿಗೆ ಸಂಪದವನ್ನು ಬಿಡುಗಡೆ ಮಾಡುತ್ತದೆ. ದಿನಾಂಕ 11.06.2023 ರಂದು ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಜಾರಿಯಾಗಿದ್ದು, ಯೋಜನೆಯ ಕುರಿತು ಹಿರಿಯ ಲೇಖಕರು ಬರೆದಿರುವ ವಿಶಿಷ್ಠ ಲೇಖನಗಳು, ಶಕ್ತಿ ಯೋಜನೆಯ ಪರಿಣಾಮ, ಶಕ್ತಿ ಯೋಜನೆಯ ಅನುಕೂಲತೆ ಬಗ್ಗೆ ಸಾರ್ವಜನಿಕರ ಅನಿಸಿಕೆ, ಅಭಪ್ರಾಯ, ಕವನಗಳು ಇತ್ಯಾದಿಗಳನ್ನು ಒಳಗೊಂಡಿರುವ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

  • ಅನುಕಂಪದ ಆಧಾರದ ಮೇಲೆ ನೇಮಕಾತಿ:

ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮೃತರಾದ ಸಿಬ್ಬಂದಿಗಳ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೌಕರಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು, ಪ್ರಸ್ತುತ ಈ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಇಂದು ನಿಗಮದಲ್ಲಿ ಸೇವೆಯಲ್ಲಿದ್ದಾಗ ಮೃತರಾದ 14 ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪಕ ಆಧಾರದ ಮೇಲೆ ನಿಗಮದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅವರಲ್ಲಿ 10 ಅವಲಂಬಿತರನ್ನು ತಾಂತ್ರಿಕ ಹುದ್ದೆಗಳಲ್ಲಿ ಮತ್ತು 4 ಅವಲಂಬಿತರನ್ನು ಚಾಲಕ-ನಿರ್ವಾಹಕ ಹುದ್ದೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು ಅವರಿಗೆ ನೇಮಕಾತಿ ಆದೇಶವನ್ನು ನೀಡಲಾಯಿತು.

ಸಾರಿಗೆ ವಿದ್ಯಾ ಚೇತನ:

ನಿಗಮವು ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೆ ಈ ಮೊದಲು ಕೈಗಾರಿಕಾ ತರಬೇತಿ, ಪದವಿ (ಬಿ.ಇ. ಬಿಎಸ್ಸಿ) ಹಾಗೂ ಸ್ನಾತಕ್ಕೋತರ ಪದವಿಗಳ ವ್ಯಾಸಂಗಕ್ಕಾಗಿ ಮಾತ್ರ ಸ್ಕಾಲರ್‌ ಶಿಪ್‌ ನೀಡುತ್ತಿದ್ದು, ಈಗ ಯೋಜನೆಯನ್ನು ಪರಿಷ್ಕರಿಸಿ ಹೆಚ್ಚಿನ ವಿಧ್ಯಾಬ್ಯಾಸಗಳನ್ನು ಸ್ಕಾಲರ್‌ ಶಿಪ್‌ ವ್ಯಾಪ್ತಿಗೆ ಸೇರಿಸಿ ನೂತನ ಸಾರಿಗೆ ವಿದ್ಯಾ ಚೇತನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ ಸ್ಕಾಲರ್‌ ಶಿಪ್‌ಗಿಂತ ಪ್ರಸ್ತುತ 3 ರಿಂದ 5½ ಪಟ್ಟು ಹೆಚ್ಚಿಸಿದ ಸ್ಕಾಲರ್‌ ಶಿಪ್‌ನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ನೂತನವಾಗಿ ಪಿಯುಸಿ, ಪದವಿ ಬಿ.ಎ., ಬಿ.ಕಾಂ., ಪಿ.ಹೆಚ್.ಡಿ ಹಾಗೂ ವಿದೇಶದಲ್ಲಿ ಮಾಡುತ್ತಿರುವ ಪದವಿ ವ್ಯಾಸಂಗವನ್ನು ಹೊಸದಾಗಿ ಸೇರ್ಪಡೆಗೊಳಿಸಿದೆ ಈ ಯೋಜನೆಯನ್ನು ಪಾರದರ್ಶಕತೆಗೊಳಿಸಲು, ತ್ವರಿತತೆ ಹಾಗೂ ನಿಖರತೆಗಾಗಿ ಗಣಕೀಕರಣಗೊಳಿಸಲಾಗಿದೆ.

  • ವಾಹನಗಳ ಪುನಶ್ಚೇತನ :

ಕೋವಿಡ್‌ ಹಿನ್ನೆಲೆಯಲ್ಲಿ ನಿಗಮವು ಸಂಪೂರ್ಣವಾಗಿ ವಾಹನಗಳನ್ನು ಪ್ರಯಾಣಿಕರು ಸಂಚರಿಸದ ಕಾರಣ ಕಾರ್ಯಾಚರಣೆ ಮಾಡಲಾಗದೆ ಆರ್ಥಿಕ ಸಂಕಷ್ಟವನ್ನು ಅನುಭವಿಸಿತ್ತು. ಕೋವಿಡ್‌ ನಂತರ ಪ್ರಯಾಣಿಕರ ಬೇಡಿಕೆ ಹೆಚ್ಚಾದಾಗ ನೂತನ ವಾಹನಗಳನ್ನು ಖರೀದಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾಗ 9 ರಿಂದ 10 ಲಕ್ಷ ಕಿ.ಮೀ ಕ್ರಮಿಸಿ ಕವಚ ದುರಸ್ಥಿಯಿಂದ ಕೂಡಿದ ಹಳೆಯ ವಾಹನಗಳನ್ನು ಪುನಶ್ಚೇತನಗೊಳಿಸಲು ಯೋಜನೆಯನ್ನು ರೂಪಿಸಿ, ಜೂನ್-2022‌ ರಿಂದ ನಿಗಮದ 2 ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಈ ಕಾರ್ಯವನ್ನು ಆರಂಭಿಸಲಾಯಿತು. ಈ ರೀತಿಯ ಪುನಶ್ಚೇತನಗೊಂಡ ವಾಹನಗಳು ಬಹಳ ಆಕರ್ಷಕವಾಗಿದ್ದು, ನೂತನ ವಾಹನಗಳಂತೆ ಪ್ರಯಾಣಿಕರಿಂದ ಸ್ವಾಗತಿಸಲ್ಪಟ್ಟ ಕಾರಣ, ಈ ಕಾರ್ಯವನ್ನು ವಿಭಾಗಗಳಲ್ಲಿಯೂ ಸಹ ಆರಂಭಿಸಲಾಯಿತು. ಇಂದಿನವರೆಗೆ ಎರಡು ಪ್ರಾದೇಶಿಕ ಕಾರ್ಯಗಾರಗಳಲ್ಲಿ 385 ಹಾಗೂ 13 ವಿಭಾಗಗಳಲ್ಲಿ 125 ವಾಹನಗಳು ಸೇರಿದಂತೆ ಒಟ್ಟಾರೆ 510 ಹಳೆಯ ವಾಹನಗಳನ್ನು ಪುನಶ್ಚೇತನಗೊಳಿಸಲಾಗಿದೆ. ಈ ರೀತಿಯ ಪುನಶ್ಚೇತನಗೊಳಿಸಿದ ವಾಹನಗಳನ್ನು ಇನ್ನೂ 3 ರಿಂದ 4 ಲಕ್ಷ ಕಿ.ಮಿ.ಗಳವರೆಗೆ ಅಥವಾ ವಾಹನಗಳ ಜೀವಿತಾವಧಿಯವರೆಗೆ ಕಾರ್ಯಾಚರಣೆ ಮಾಡಬಹುದಾಗಿದ್ದು, ಇದರಿಂದಾಗಿ ನಿಗಮವು ನೂತನ ಆಧುನಿಕ ವಿಧಾನಗಳನ್ನು ಹಾಗೂ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಈ ವಿನೂತನ ಯೋಜನೆಯ ಕುರಿತು ಹೊರತಂದಿರುವ ಬ್ರೋಷರ್‌ ಹಾಗೂ ಸಾಕ್ಷ್ಯಚಿತ್ರವನ್ನು ಇಂದು ಬಿಡುಗಡೆ ಮಾಡಲಾಯಿತು.

  • ವಿಭಾಗಗಳಿಗೆ ಹಾಗೂ ಅಧಿಕಾರಿಗಳಿಗೆ ಪುರಸ್ಕಾರ:

ನಿಗಮವು ಕೈಗೊಂಡ ವಿಶಿಷ್ಟ ಪುನಶ್ಚೇತನ ಕಾರ್ಯವನ್ನು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಮತ್ತು ವಿಭಾಗಗಳಲ್ಲಿ ಕೈಗೊಂಡು ಉತ್ತಮ ಸಾಧನೆಯನ್ನು ಮಾಡಲಾಗಿದೆ. ಪ್ರಾದೇಶಿಕ ಕಾರ್ಯಾಗಾರ ಬೆಂಗಳೂರಿನಲ್ಲಿ 192, ಪ್ರಾದೇಶಿಕ ಕಾರ್ಯಾಗಾರ ಹಾಸನದಲ್ಲಿ 193 ಹಾಗೂ ವಿಭಾಗಗಳಲ್ಲಿ 125 ವಾಹನಗಳ ಪುನಶ್ಚೇತನ ನಿರ್ವಹಿಸಿ ನವೀಕೃತ ವಾಹನಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಉತ್ತಮ ಕಾರ್ಯಕ್ಕಾಗಿ 2 ಪ್ರಾದೇಶಿಕ ಕಾರ್ಯಾಗಾರಗಳಿಗೆ ತಲಾ ರೂ. 2 ಲಕ್ಷ ಹಾಗೂ ವಿಭಾಗಗಳಿಗೆ ತಲಾ ರೂ. 1 ಲಕ್ಷ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪುನಶ್ಚೇತನ ಕಾರ್ಯದ ನೇತೃತ್ವ ವಹಿಸಿ ಮೇಲ್ವಿಚಾರಣೆವಹಿಸಿ ಉತ್ತಮ ಫಲಿತಾಂಶ ಬರಲು ಶ್ರಮಿಸಿದ 03 ಹಿರಿಯ ತಾಂತ್ರಿಕ ಅಧಿಕಾರಿಗಳಿಗೆ ರೂ. 50,000 ಪುರಸ್ಕಾರ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಕ್ಯಾಂಟೀನ್‌ ಅಡುಗೆ ಉಪಕರಣಗಳ ಉನ್ನತೀಕರಣ:

ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು ಮತ್ತು ಹಾಸನದಲ್ಲಿ ನಿಗಮದ ವತಿಯಿಂದ ಕ್ಯಾಂಟೀನ್‌ ನಡೆಸಲಾಗುತ್ತಿದ್ದು, ಇಲ್ಲಿ ಸ್ಥಾಪಿಸಲಾಗಿರುವ ಅಡುಗೆ ಉಪಕರಣಗಳು ಹಳೆಯದಾಗಿರುವ ಕಾರಣ, ಅವುಗಳ ಉನ್ನತೀಕರಣಕ್ಕಾಗಿ ಇಂದು ಪ್ರತಿ ಕಾರ್ಯಾಗಾರಕ್ಕೆ ತಲಾ ರೂ.2 ಲಕ್ಷಗಳನ್ನು ಬಿಡುಗಡೆ ಮಾಡಿ, ಈ ಮೂಲಕ ಅಲ್ಲಿನ ಸಿಬ್ಬಂದಿಗಳಿಗೆ ರುಚಿ ಮತ್ತು ಶುಚಿಯಾದ ತಿಂಡಿ ಮತ್ತು ಊಟ ವನ್ನು ಒದಗಿಸಲು ಕ್ರಮ ಜರುಗಿಸಲಾಗಿದೆ.

  •  ಸಾರಿಗೆ ಮಿತ್ರ ಹೆಚ್. ಆರ್.‌ ಎಂ. ಎಸ್‌ ಯೋಜನೆಗೆ ಚಾಲನೆ.

ನಿಗಮವು ತಂತ್ರಜ್ಞಾನ ಆಳವಡಿಕೆಯಲ್ಲಿ ಸದಾ ಕಾರ್ಯ ಪ್ರವೃತ್ತವಾಗಿದ್ದು, ಆ ನಿಟ್ಟಿನಲ್ಲಿ ಘಟಕಗಳ ಗಣಕೀಕರಣ, ಆನ್‌ಲೈನ್‌ ರಜಾ ನಿರ್ವಾಹಣಾ ವ್ಯವಸ್ಥೆ, ಸೇವಾ ಪುಸ್ತಕ ಹಾಗೂ ವೈಯಕ್ತಿಕ ವಿವರಗಳನ್ನು ಗಣಕೀಕರಣಗೊಳಿಸಿದೆ. ತುರ್ತು ನಿರ್ದಾರಗಳನ್ನು ಕೈಗೊಳ್ಳುವ ಸಲುವಾಗಿ ಹಾಗೂ ಕೇಂದ್ರ ಕಛೇರಿ ಮಟ್ಟದಲ್ಲಿ ಮಾಹಿತಿಯನ್ನು ತ್ವರಿತವಾಗಿ ಹಾಗೂ ಸುಲಭವಾಗಿ ನಿರ್ವಹಣೆ ಮಾಡಲು ಹಾಜರಾತಿ, ರಜೆ ನಿರ್ವಹಣೆ, ಪೇರೋಲ್‌, ಸಿಬ್ಬಂದಿ ಆಗಮನ/ನಿರ್ಗಮನ, ವರ್ಗಾವಣೆ ಮಾಹಿತಿ, ಶಿಸ್ತು, ಮುಂಬಡ್ತಿ, ತರಬೇತಿ ಹಾಗೂ ಎಂ.ಐ.ಎಸ್‌ ಗಳನ್ನು ಒಳಗೊಂಡಂತೆ ಗಣಕೀಕರಣಗೊಳಿಸಿ, ನೂತನ ಸಾರಿಗೆ ಮಿತ್ರ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದರಿಂದ ಸಿಬ್ಬಂದಿಗಳಿಗೆ ಹೆಚ್ಚಿನ ಅನುಕೂಲತೆಗಳನ್ನು ತ್ವರಿತವಾಗಿ ಒದಗಿಸಲು ಸಹಾಯವಾಗುತ್ತದೆ.

  • ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ:

ನಿಗಮದಲ್ಲಿ 5 ವರ್ಷಗಳ ಕಾಲ ಅಪಘಾತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲನಾ ಸಿಬ್ಬಂದಿಗಳಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತದೆ. ಇಂದು ಬೆಂಗಳೂರು ಕೇಂದ್ರೀಯ ವಿಭಾಗದ 38 ಚಾಲಕರುಗಳಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಗುತ್ತಿದೆ. ಈ ಬೆಳ್ಳಿ ಪದಕವು ಚಿನ್ನದ ಲೇಪನದೊಂದಿಗೆ 32 ಗ್ರಾಂ ತೂಕವಿರುತ್ತದೆ. ವಿಜೇತ ಚಾಲಕರಿಗೆ ರೂ.2,000/- ನಗದು ಪುರಸ್ಕಾರ ಹಾಗೂ ಮಾಸಿಕ ರೂ. 250/- ಭತ್ಯೆ ನೀಡಲಾಗುತ್ತದೆ.

ಸಮಾರಂಭದಲ್ಲಿ ಏಕ ಸದಸ್ಯ ಸಮಿತಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತ, ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಬೆಂ.ಮ.ಸಾ.ಸಂವ್ಯವಸ್ಥಾಪಕ ನಿರ್ದೇಶಕರಾದ ಜಿ. ಸತ್ಯವತಿ ಹಾಗೂಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts