‘ಕರ್ನಾಟಕ ಭಾರತ ಗೌರವ ಕಾಶಿ ದರ್ಶನ” ಯಾತ್ರೆ ಮತ್ತಷ್ಟು ಅರ್ಥಪೂರ್ಣ.. ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಜೊತೆ ಇದೀಗ ‘ಗಯಾ ದರ್ಶನ ಭಾಗ್ಯ’

ಬೆಂಗಳೂರು: ಆಸ್ತಿಕರ ಪಾಲಿಗೆ ರಾಜ್ಯ ಸರ್ಕಾರ ‘ತೀರ್ಥಯಾತ್ರೆ ಭಾಗ್ಯ’ ಕರುಣಿಸುವ ಮೂಲಕ ಮತ್ತೊಂದು ಮಜಲಿಗೆ ಹೆಜ್ಜೆ ಇಟ್ಟಿದೆ. ಈಗಾಗಲೇ ಜಾರಿಯಲ್ಲಿರುವ ‘ಕರ್ನಾಟಕ ಭಾರತ ಗೌರವ ಕಾಶಿ ದರ್ಶನ” ರೈಲು ಯಾತ್ರೆಯ ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಯಲ್ಲಿ ಈ ಬಾರಿ ಬಿಹಾರದ ಗಯಾ ಕ್ಷೇತ್ರದ ದರ್ಶನ ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ಸರ್ಕಾರ 8 ದಿನಗಳ ಯಾತ್ರೆಯನ್ನು 9 ದಿನಗಳಿಗೆ ಹೆಚ್ಚಿಸಲಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಈ ಯೋಜನೆ ಅಡಿಯಲ್ಲಿ ಸದರಿ ಪ್ಯಾಕೇಜ್ ಗೆ ಈ ಹಿಂದೆ ನಿಗದಿ ಮಾಡಲಾಗಿದ್ದ ಸರ್ಕಾರದಿಂದ ನೀಡಲಾಗುವ 5000 ರೂಪಾಯಿಗಳ ಸಹಾಯಧನ ಮೊತ್ತವನ್ನು 7500 ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಸದರಿ ಪ್ಯಾಕೇಜ್ ಯೋಜನೆಯಲ್ಲಿ ಹೊಸದಾಗಿ LHB ಕೋಚ್‌ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಸಜ್ಜಿತವಾದ ಅಡುಗೆ ಮನೆ ಹಾಗೂ ಇಬ್ಬರು ವೈದ್ಯರು ಸಹ ಯಾತ್ರಾರ್ಥಿಗಳ ಜೊತೆಯಲ್ಲಿ ಸೇವಾ ನಿರತರಾಗಿರುತ್ತಾರೆ.

ಆಗಸ್ಟ್ ತಿಂಗಳಲ್ಲಿ ಹೊರಡಲಿರುವ 5ನೇ ಟ್ರಿಪ್ 29.08.2023ರಂದು ನಿರ್ಗಮನವಾಗಿ 06.09.2023ರಂದು ಆಗಮನವಾಗಲಿದೆ.  ಅಂತೆಯೇ ಸೆಪ್ಟೆಂಬರ್ ತಿಂಗಳಲ್ಲಿ ಹೊರಡಲಿರುವ 6ನೇ ಟ್ರಿಪ್ 23.09.2023ರಂದು ನಿರ್ಗಮನವಾಗಿ,  02.10.2023ರಂದು ಆಗಮನವಾಗಲಿದೆ ಎಂದವರು ಮಾಹಿತಿ ಒದಗಿಸಿದ್ದಾರೆ.

ಈ ಯಾತ್ರೆಗೆ ತುಮಕೂರಿನಲ್ಲಿ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿರುತ್ತದೆ ಎಂದಿರುವ ಸಚಿವರು, ಅಯೋಧ್ಯೆಗೆ ಭೇಟಿ ನೀಡುವ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಭವನ ವಸತಿ ಸಂಕೀರ್ಣ ನಿರ್ಮಾಣ ಮಾಡುವ ಸಂಬಂಧ ಸುಮಾರು 5 ಎಕರೆ ಭೂಮಿ ಮಂಜೂರು ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಪತ್ರ ಬರೆದು ಕೋರಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವೇಳೆ, ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯ ಇತ್ಯಾದಿಗಳ ಕೆಲಸಕ್ಕೆಂದು ಸರ್ಕಾರ ಬಿಡುಗಡೆ ಮಾಡುವ ʼತಸ್ತಿಕ್ʼ ಹಣವನ್ನು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ ಎಂದೂ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

Related posts