ಗುತ್ತಿಗೆದಾರರಿಗೆ ನ್ಯಾಯ ನೀಡಲು ರಾಜ್ಯಪಾಲರು ಮಧ್ಯಪ್ರವೇಶ ಮಾಡಲಿ; ಗೋಪಾಲಯ್ಯ ಆಗ್ರಹ

ಬೆಂಗಳೂರು: ಕಾಮಗಾರಿ ಬಿಲ್ ತಡೆ ಹಿಡಿದ ವಿಷಯದಲ್ಲಿ ಗೌರವಾನ್ವಿತ ರಾಜ್ಯಪಾಲರು ಮಧ್ಯಪ್ರವೇಶಿಸಿ ಗುತ್ತಿಗೆದಾರರಿಗೆ ನ್ಯಾಯ ಕೊಡಬೇಕು ಎಂದು ಮಾಜಿ ಸಚಿವ ಕೆ.ಗೋಪಾಲಯ್ಯ ಒತ್ತಾಯಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ|| ಸಿ.ಎನ್. ಅಶ್ವತ್ಥನಾರಾಯಣ್, ಬಿಡಿಎ ಮಾಜಿ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್. ವಿಶ್ವನಾಥ್, ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಗೋಪಾಲಯ್ಯ ಕಾಂಗ್ರೆಸ್ ಸರ್ಕಾರ ಹಾಗೂ ಗುತ್ತಿಗೆದಾರರ ಸಂಘದ ಕೆಂಪಣ್ಣ ವಿರುದ್ದ ಹರಿಹಾಯ್ದರು. ಕೆಂಪಣ್ಣನವರು ಪ್ರಧಾನಿಗೂ ಮನವಿ ನೀಡಿದ್ದರು. ಅವರು ಗುತ್ತಿಗೆ ಕೆಲಸ ಮಾಡುತ್ತಿದ್ದರೆ 400- 500 ಜನರ ಪರವಾಗಿ ಇರುತ್ತಾರಾ? ಕಾಂಗ್ರೆಸ್ ಪರವಾಗಿ ನಿಲ್ಲುತ್ತಾರಾ? ಎಂದು ಗೋಪಾಲಯ್ಯ ಪ್ರಶ್ನಿಸಿದರು.

224 ಜನ ಶಾಸಕರಿದ್ದೀವಿ. ನೀವು ಯಾರಿಗೆ ಹಣ ಕೊಟ್ಟಿದ್ದೀರೆಂದು ಬಹಿರಂಗಪಡಿಸಿ ಎಂದು ಸವಾಲೆಸೆದ ಗೋಪಾಲಯ್ಯ 40 ಶೇಕಡಾವನ್ನು ಯಾರಿಗೆ ಕೊಟ್ಟಿದ್ದೀರೆಂದು ತಿಳಿಸಿ, ಇಲ್ಲವಾದರೆ ರಾಜ್ಯದ ಜನರ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.

ಕೆಂಪಣ್ಣನವರು ಕಾಂಗ್ರೆಸ್‍ನಿಂದ ಕಿಕ್ ಬ್ಯಾಕ್ ಪಡೆದುದು ಸ್ಪಷ್ಟವಾಗುತ್ತಿದೆ. ಗುತ್ತಿಗೆದಾರರ ಕುಟುಂಬ ನೇಣು ಹಾಕಿಕೊಳ್ಳುವ ಸ್ಥಿತಿ ಬಂದಿದೆ. ನಿನ್ನೆ ಮೃತ ಗೌತಂ ಕಂಟ್ರಾಕ್ಟರ್ ಕುಟುಂಬಕ್ಕೆ ಸೇರಿದವರು ಎಂದು ಆರಂಭದಲ್ಲಿ ತಿಳಿಸಲಾಗಿತ್ತು ಎಂದರಲ್ಲದೆ, ತಕ್ಷಣ ಹಣ ಬಿಡುಗಡೆ ಮಾಡಿ. ಅನಾಹುತಗಳಿಗೆ ಅವಕಾಶ ಕೊಡದಿರಿ ಎಂದು ಒತ್ತಾಯ ಮಾಡಿದರು.

ಕೇಂದ್ರದ ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ. ರಾಜ್ಯದ ಮೇಲೆ ಹಿಡಿತ ಇಲ್ಲವಾಗಿದೆ ಎಂದು ಆರೋಪಿಸಿದರು. ಗುತ್ತಿಗೆದಾರರ ಹಣ ಕೂಡಲೇ ಬಿಡುಗಡೆ ಮಾಡಿ ಎಂದ ಅವರು, ಡಿಸಿಎಂ ತಾಂತ್ರಿಕ ಸಲಹೆಗಾರ ಕೆ.ಟಿ.ನಾಗರಾಜ್ ಹಿನ್ನೆಲೆಯನ್ನೂ ಕೆದಕಬೇಕಲ್ಲವೇ? 26 ಕಂಡಿಷನ್ ಹಾಕಿ ಕಿರುಕುಳ ಕೊಡುವುದನ್ನು ಗಮನಿಸಿ ಎಂದರು. ರಾಜ್ಯದ ಲೂಟಿ ಹೊಡೆಯಲು ಈ ನೇಮಕ ಆಗಿದೆಯೇ ಎಂದು ನೇರವಾಗಿ ಪ್ರಶ್ನಿಸಿದರು.

ಕಳೆದ 85 ದಿನಗಳಿಂದ ಕಾಂಗ್ರೆಸ್ ಸರಕಾರವು ಒಂದಲ್ಲ ಒಂದು ದುರ್ಘಟನೆಗಳಿಗೆ ನೇರ ಹೊಣೆಯಾಗಿದೆ. ಗುತ್ತಿಗೆದಾರರು ರಾಜ್ಯಪಾಲರಿಗೆ ನೇರ ದೂರು ಕೊಟ್ಟಿರಲಿಲ್ಲ. ಉಪ ಮುಖ್ಯಮಂತ್ರಿಗಳು ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಡಿಸಿಎಂ ಜೊತೆ ಕೈ ಜೋಡಿಸಿದ್ದಾರಾ ಎಂದು ಕೇಳಿದರು.

ಅಜ್ಜಯ್ಯ ದೇವರನ್ನು ನಂಬಿದ್ದೀರಾ? ಆಣೆ ಮಾಡಿ ಎಂದು ಆಗ್ರಹಿಸಿದ ಗೋಪಾಲಯ್ಯ. ಕಂಟ್ರಾಕ್ಟರ್‍ಗಳು ಬೀದಿ ಬೀದಿ ಸುತ್ತುತ್ತಿದ್ದಾರೆ. ನಮ್ಮ ನಾಯಕರನ್ನೂ ಭೇಟಿ ಮಾಡಿದ್ದಾರೆ. ಕೇಂದ್ರದ ನಾಯಕರಿಗೆ ಹಣ ಸಂಗ್ರಹಿಸಲು ಹೊರಟಿದ್ದಾರೆಯೇ ಎಂದು ಕೇಳಿದರು.
300ಕ್ಕಿಂತ ಹೆಚ್ಚು ಗುತ್ತಿಗೆದಾರರು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದು, ಬಿಲ್ ತಡೆಹಿಡಿದುದು ಮತ್ತು ಲಂಚ ಕೇಳಿದ್ದು ನಾಚಿಗೆಗೇಡಿನ ಕೆಲಸವಲ್ಲವೇ? ಗುತ್ತಿಗೆದಾರರು ಕೆಲಸ ನಿಲ್ಲಿಸಿದರೆ ಲಕ್ಷಗಟ್ಟಲೆ ನಿರುದ್ಯೋಗ ಸೃಷ್ಟಿ ಆಗುವುದು ನಿಮ್ಮ ಗಮನಕ್ಕೆ ಬರಲಿಲ್ಲವೇ? ರಾಜ್ಯ ಸರಕಾರವು ಬೆಂಗಳೂರಿಗೆ ಒಂದು ನೀತಿ, ಇತರೆಡೆಗೆ ಇನ್ನೊಂದು ನೀತಿ ಅನುಸರಿಸುತ್ತಿದ್ದು, ರಾಜ್ಯದಲ್ಲಿ ಒಂದು ಸರಕಾರ ಇದೆಯೇ? ಎರಡು ಸರಕಾರಗಳಿವೆಯೇ ಎಂದು ಪ್ರಶ್ನಿಸಿದರು.

ನಾನು, ನನ್ನ ಪತ್ನಿ, ಕುಟುಂಬ ಬಿಜೆಪಿ ದೃಢಪಡಿಸಲು ಶ್ರಮಿಸುತ್ತೇವೆÉ. ಬದುಕಿರುವ ವರೆಗೂ ಈ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದರು. ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟಿದೆ. ಮೋದಿಜಿ ಅವರ ಆಡಳಿತ ಇನ್ನೂ ಮುಂದುವರೆಯಬೇಕೆಂಬ ಆಶಯ ನನ್ನದು. ಮೋದಿಜಿ ಅವರು ವಿಶ್ವನಾಯಕರಾಗಿದ್ದಾರೆ. ಅವರೇ 2024ರಲ್ಲೂ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂದು ನುಡಿದರು. ಮತ್ತೆ ಇದೇ ಪ್ರಶ್ನೆ ಕೇಳದಿರಿ ಎಂದು ಮನವಿ ಮಾಡಿದರು.

Related posts