ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಡೆದ ಯಡವಟ್ಟು ನಟ ಉಪೇಂದ್ರ ಅವರನ್ನು ಹೈಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದು ಕಹಿ ಸತ್ಯ. ಈ ಪ್ರಕರಣದಲ್ಲಿ ಉಪೇಂದ್ರ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಾಗೂ ಹಲಸೂರು ಗೆಟ್ ಪೊಲೀಸ್ ಠಾಣೆಗಳಲ್ಲಿ ಜಾತಿ ನಿಂದನೆಯ ಕೇಸ್ ದಾಖಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡುತ್ತಿದ್ದಂತೆಯೇ ಹೈಕೋರ್ಟ್ ಮೊರೆ ಹೋದ ಉಪೇಂದ್ರ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ಗೆ ತಡೆಯಾಜ್ಞೆ ತಂದಿದ್ದಾರೆ.
ತಮ್ಮ ವಿರುದ್ಧದ ಎಫ್ಐಆರ್ಗೆ ತಡೆ ನೀಡಬೇಕು ಎಂದು ಕೋರಿ ಉಪೇಂದ್ರ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಉಪೇಂದ್ರ ಪರ ವಾದಿಸಿದ ಹಿರಿಯ ವಕೀಲ ಉದಯ್ ಹೊಳ್ಳ, ತಮ್ಮ ಕಕ್ಷಿದಾರರು ‘ಗಾದೆ ಮಾತು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆಯೇ ಹೊರತು ಯಾರ ವಿರುದ್ದವೂ ದುರುದ್ದೇಶದಿಂದ ಯಾವುದೇ ಪದ ಬಳಸಿಲ್ಲ. ಹಾಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುವುದಿಲ್ಲ’ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ವಾದವನ್ನು ಆಲಿಸಿದ ಹೈಕೋರ್ಟ್, ಉಪೇಂದ್ರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ತಡೆ ನೀಡಿದೆ.