ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಈಗ ಕಾವೇರಿ, ಕನ್ನಡಿಗರ ಬಗ್ಗೆ ಚಿಂತೆ ಇಲ್ಲ. ಅವರಿಗೆ ಘರ್ ವಾಪ್ಸಿಯದ್ದೇ ಚಿಂತೆಯಾಗಿದೆ. ಈ ಚಿಂತೆಯಲ್ಲಿರುವ ಅವರು ನಮ್ಮನ್ನು ಸರ್ವಪಕ್ಷ ಸಭೆಗೆ ಕರೀತಾರೋ ಇಲ್ವೋ ಗೊತ್ತಿಲ್ಲ. ಅವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ಕುಟುಕಿದ್ದಾರೆ.
ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಜರಗನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು. ರಾಜ್ಯ ಕಾಂಗ್ರೆಸ್ ಸರಕಾರ ವರ್ಗಾವಣೆ ದಂಧೆ, ಕಮೀಷನ್ ವ್ಯವಹಾರ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಹಾದಿ ಬೀದಿಯಲ್ಲಿ ಜನರು ಛೀ, ಥೂ ಎನ್ನುತ್ತಿದ್ದಾರೆ. ಇದನ್ನು ಮರೆ ಮಾಚಲು ಘರ್ ವಾಪ್ಸಿ ನಾಟಕ ಆಡುತ್ತಿದೆ ಎಂದು ಟೀಕಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಅರ್ಧಕ್ಕರ್ಧ ಮುಗಿದು ಹೋಗುತ್ತದೆ, ಜೆಡಿಎಸ್ ಮುಗಿದೇ ಹೋಗುತ್ತದೆ ಅಂತಿದ್ದಾರೆ. ನಿನ್ನೆ ಮೊನ್ನೆ ಆಯ್ಕೆ ಆದವರು ಕೂಡ 10-20ಕ್ಕೂ ಹೆಚ್ಚು ಎಂಎಲ್ ಎಗಳು ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ಆ ಪಕ್ಷದಲ್ಲಿ ಇರುವ ಶಾಸಕರ ತಳಮಳದ ಬಗ್ಗೆ ಅವರು ಮಾತನಾಡುತ್ತಿಲ್ಲ, ಯಾಕೆ ಎಂದು ಅವರು ಪ್ರಶ್ನಿಸಿದರು.
ಇವರಿಗೆ ಗೊತ್ತಿರಲಿ, ಯಾವುದೇ ಪಕ್ಷವನ್ನು ನಿರ್ನಾಮ ಮಾಡೋದು ಯಾರಿಂದಲೂ ಸಾಧ್ಯವಿಲ್ಲ. ಹಿಂದೆ ಎಸ್.ಎಂ. ಕೃಷ್ಣ ಅವರ ಬಹುಮತದ ಸರಕಾರ ಇತ್ತು. ಆಗಲೂ ಬಿಜೆಪಿ, ಜೆಡಿಎಸ್ ನಿಂದ ಹಲವಾರು ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರು. ಆಮೇಲೆ 2004ರಲ್ಲಿ ಏನಾಯ್ತು? 2008ರಲ್ಲಿ ಬಿಜೆಪಿಯವರು ಕೂಡ ಹಾಗೆಯೇ ಮಾಡಿದರು. 2013ಕ್ಕೆ ಏನಾಯಿತು? 2013ರಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಮ್ಮ ಶಾಸಕರಿಂದ ಕ್ರಾಸ್ ವೋಟಿಂಗ್ ಮಾಡಿ ಕರೆದುಕೊಂಡು ಹೋಯಿತು. 2018ರಲ್ಲಿ ಎಲ್ಲಿಗೆ ಬಂದು ನಿಂತಿತು? ಇನ್ನು ಬಿಜೆಪಿಯವರು 17 ಶಾಸಕರನ್ನು ಕರೆದುಕೊಂಡು ಹೋಗಿ 3 ವರ್ಷ ಸರಕಾರವನ್ನೂ ಮಾಡಿ ಈಗೆಲ್ಲಿ ಬಂದು ನಿಂತಿದ್ದಾರೆ. ಮುಂದೆ ಇವರ ಹಣೆಬರಹವೂ ಇಷ್ಟೇ. ಈ ಘರ್ ವಾಪ್ಸಿಗಳೆಲ್ಲ ಕೆಲಸ ಮಾಡಲ್ಲ ಎಂದು ಕುಮಾರಸ್ವಾಮಿ ವಿಶ್ಲೇಷಿಸಿದರು.
ಮಾಜಿ ಶಾಸಕ ಆಯನೂರು ಮಂಜುನಾಥ್ ಮತ್ತು ಡಿ.ಕೆ.ಶಿವಕುಮಾರ್ ಭೇಟಿ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮಿ, ಹೋಗುವವರನ್ನು ಹಿಡಿದುಕೊಳ್ಳಲು ಆಗುತ್ತಾ? ಈಗೆಲ್ಲಾ ಪಕ್ಷ ನಿಷ್ಠೆಗಿಂತ ವೈಯಕ್ತಿಕ ಲಾಭವೇ ಮುಖ್ಯವಾಗಿದೆ ಕೆಲವರಿಗೆ. ಈ ಬಗ್ಗೆ ಇನ್ನೇನು ಹೇಳಲಾರೆ ಎಂದರು.
ಕಾಂಗ್ರೆಸ್ ನವರು ಎಲ್ಲಾ ಪಕ್ಷಗಳ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮದೂ ಅವಕಾಶವಾದಿ ರಾಜಕಾರಣವೇ ಎಂದು ಅವರೇ ಹೇಳಿಲ್ಲವೇ? ಬಿಜೆಪಿಯವರು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪೇ? ಎಂದು ಅವರೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.