ಬೆಂಗಳೂರು: ಲೋಕಾಯುಕ್ತರು ಹಾಗೂ ಉಪಲೋಕಾಯುಕ್ತರೂ ತಮ್ಮ ಆಸ್ತಿ ವಿವರ ದಾಖಲಿಸಬಾರದೇಕೆ? ಇಂಥದ್ದೊಂದು ಚರ್ಚೆ ಸಾಮಾಜಿಕ ವಲಯದಲ್ಲಿ ನಡೆಯುತ್ತಲೇ ಇದೆ. ಭ್ರಷ್ಟಾಚಾರಕ್ಕೆ ಅಂಕುಶ ಹಾಕುವ ಹೊಣೆ ಹೊತ್ತವರೇ ಮೊದಲು ಪಾರದರ್ಶಕ ನಡೆ ಅನುಸರಿಸಬೇಕಿದೆ ಎಂಬುದು ಅನೇಕರ ಅಭಿಪ್ರಾಯ. ಆದರೆ ಈ ರೀತಿಯ ಕ್ರಮಕ್ಕೆ ಅಧಿಕಾರಿಗಳು ಮುನ್ನುಡಿ ಬರೆದರೂ ಸರ್ಕಾರ ಮಾತ್ರ ಇಚ್ಚಾಶಕ್ತಿ ತೋರಿಸುತ್ತಿಲ್ಲ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ.
ಲೋಕಾಯುಕ್ತರು ಹಾಗೂ ಉಪಲೋಕಾಯುಕ್ತರು ಪ್ರತೀ ವರ್ಷ ತಮ್ಮ ಆಸ್ತಿ ಹಾಗೂ ದಾಯಿತ್ವ ಪಟ್ಟಿಯನ್ನು ಪ್ರಕಟಿಸಲು ಕಾಯಿದೆಯಲ್ಲಿ ತಿದ್ದುಪಡಿ ಮೂಲಕ ಅನುವು ಮಾಡಿಕೊಡಬೇಕೆಂದು ಕೋರಿ ಮಾಜಿ ಶಾಸಕ ರಮೇಶ್ ಬಾಬು ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. 2021ರ ಜುಲೈ 12ರಂದು ಮುಖ್ಯಮಂತ್ರಿಗೆ ಬರೆದಿದ್ದ ಪತ್ರವನ್ನು ಪರಿಶೀಲಿಸಿರುವ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಕಾರ್ಯದರ್ಶಿಗಳು ಮುಂದಿನ ಕ್ರಮವಿಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಡತ ರವಾನಿಸಿ ಕೈತೊಳೆದುಕೊಂಡಿದ್ದಾರೆ. ಇಂತಹ ವಿಚಾರಗಳು ಆಡಳಿತ ಇಲಾಖೆಗೆ ಸಂಬಂಧಿಸಿದ್ದು ಎಂದು ಉಲ್ಲೇಖಿಸಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಸಹಾಯಕ ಪ್ರರೂಪಕರು ಮತ್ತು ಅಧೀನ ಕಾರ್ಯದರ್ಶಿ ಡಿ.ಬಿ.ಜನಾರ್ಧನ ಅವರು ರಮೇಶ್ ಬಾಬು ಅವರ ಮನವಿಯನ್ನು ಸೂಕ್ತ ಕ್ರಮಕ್ಕಾಗಿ 05.08.2021ರಂದೇ ಡಿಪಿಎಆರ್‌ಗೆ ಕಳುಹಿಸಿದ್ದರು. ಆದರೆ ಎರಡು ವರ್ಷಗಳು ಕಳೆದರೂ ಈ ಬಗ್ಗೆ ಯಾವುದೇ ಕ್ರಮ ಜಾರಿಯಾಗಿಲ್ಲ.
ಈ ಬಗ್ಗೆ ಬೇಸರಗೊಂಡಿರುವ ಆಡಳಿತಾರೂಢ ಕಾಂಗ್ರೆಸ್ ವಕ್ತಾರರೂ ಆದ ರಮೇಶ್ ಬಾಬು ಅವರು ಇಂದು (22.08.2023) ಈಗಿನ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮತ್ತೊಮ್ಮೆ ಸರ್ಕಾರದ ಗಮನಸೆಳೆದಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಮಾಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಇಲಾಖೆಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕೆಂದು ರಮೇಶ್ ಬಾಬು ಅವರು ಸಿಎಂಗೆ ಮನವಿ ಮಾಡಿದ್ದಾರೆ.