ದೊಡ್ಡಬಳ್ಳಾಪುರ:: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮಾರಾಟಕ್ಕೆಂದು ತಾವರೆ ಹೂ ಕೀಳಲು ಕೆರೆಗಿಳಿದ ತಂದೆ-ಮಗ ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿ ಕೆರೆಯಲ್ಲಿ ಸಂಭವಿಸಿದೆ. ಮೃತರನ್ನು ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿ ಪುಟ್ಟರಾಜು (55 ವರ್ಷ), ಕೇಶವ (18 ವರ್ಷ) ಎಂದು ಗುರುತಿಸಲಾಗಿದೆ.
ವರಮಹಾಲಕ್ಷ್ಮೀ ಹಬ್ಬಕ್ಕೆ ಮಾರಾಟ ಮಾಡಲು ತಾವರೆ ಹೂ ಕೀಳಲು ತಂದೆ ಮತ್ತು ಮಗ ಕೆರೆ ಬಳಿ ತೆರಳಿದ್ದರು ಎನ್ನಲಾಗಿದೆ. ಬಟ್ಟೆ, ಮೊಬೈಲ್ ಮತ್ತು ಚಪ್ಪಲಿಗಳನ್ನು ದಡದಲ್ಲಿ ಇಟ್ಟು, ತಾವರೆ ಹೂ ಕೀಳುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಮತ್ತೋರ್ವ ವ್ಯಕ್ತಿ ಮೊಬೈಲ್ ರಿಂಗ್ ಆಗುತ್ತಿರುವುದನ್ನು ಕಂಡು ರಿಸೀವ್ ಮಾಡಿದಾಗ, ಮೃತನ ತಾಯಿ ತಾವರೆ ಹೂ ಕೀಳಲು ತಂದೆ ಮಗ ಬಂದಿದ್ದರು ಎಂದು ತಿಳಿಸಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ತಂದೆ-ಮಗನಿಗಾಗಿ ಬುಧವಾರ ರಾತ್ರಿವರೆಗೂ ಶೋಧ ನಡೆಸಲಾಗಿದೆ. ಕತ್ತಲಲ್ಲಿ ಶೋಧಕಾರ್ಯ ಕಷ್ಟಸಾಧ್ಯವಾಗಿದ್ದರಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಗುರುವಾರ ಬೆಳಿಗ್ಗೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.