ಮೂರನೇ ಜನ್ಮ ಸಿಕ್ಕಿದೆ: ಮಾಜಿ ಸಿಎಂ ಹೆಚ್ಡಿಕೆ 

ಬೆಂಗಳೂರು: ದೇವರು, ರಾಜ್ಯದ ಜನರು ಹಾಗೂ ತಂದೆ ತಾಯಿಯ ಆಶೀರ್ವಾದ, ವೈದ್ಯರ ಆರೈಕೆಯಿಂದ ನನಗೆ ಮೂರನೇ ಜನ್ಮ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಆರೋಗ್ಯದ ಬಗ್ಗೆ ಯಾರೂ ನಿಷ್ಕಾಳಜಿ ವಹಿಸಬಾರದು. ಏನೇ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ಎಚ್ಚೆತ್ತು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ಅವರು ಜನತೆಯಲ್ಲಿ ವಿನಂತಿ ಮಾಡಿಕೊಂಡರು. ಅನಾರೋಗ್ಯದಿಂದ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು ಪೂರ್ಣ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಈ ಸಂದರ್ಭದಲ್ಲಿ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ ಐದು ದಿನಗಳಿಂದ ನಾಡಿನ ಜನರು, ಅಭಿಮಾನಿಗಳು, ಹಿತೈಷಿಗಳು, ಮಾಧ್ಯಮ ಸ್ನೇಹಿತರು, ಆತಂಕದಿಂದ ಕಾಯುತ್ತಿದ್ದರು. ಪ್ರಥಮವಾಗಿ ಭಗವಂತನಿಗೆ, ತಂದೆತಾಯಿಗಳ ಅವರಿಗೆ ಹಾಗೂ ಆಸ್ಪತ್ರೆಯ ಎಲ್ಲಾ ವೈದ್ಯವೃಂದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ತಮ್ಮ ಆರೋಗ್ಯ ಕೈತಪ್ಪಿ ಆಸ್ಪತ್ರೆಗೆ ದಾಖಲಾದ ಸಂದರ್ಭವನ್ನು ವಿವರಿಸಿದ ಮಾಜಿ ಮುಖ್ಯಮಂತ್ರಿ ಅವರು; ಆ ದಿನ ನಾನು ಬಿಡದಿಯ ನನ್ನ ತೋಟದ ಮನೆಯಲ್ಲಿದ್ದೆ. ನನ್ನ ಆಪ್ತ ಸಹಾಯಕ ಸತೀಶ್ ಜತೆಯಲ್ಲಿ ಇದ್ದರು. ತಡರಾತ್ರಿ ನನ್ನ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿತು. ತಕ್ಷಣವೇ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಕರೆ ಮಾಡಿ, ಅವರ ಸಲಹೆ ಮೇರೆಗೆ ಅಪೋಲೋ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ಸತೀಶ್ ಚಂದ್ರ ಅವರನ್ನು ಸಂಪರ್ಕ ಮಾಡಲಾಯಿತು. ಬಿಡದಿ ತೋಟದ ಮನೆಯಿಂದ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಇಲ್ಲಿಗೆ ತಲುಪಿದೆ ಎಂದರು.

ನಾನು ಆ ಸಂದರ್ಭದಲ್ಲಿ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದಿರೂ ಇವತ್ತು ಇಷ್ಟು ಸರಾಗವಾಗಿ ಮಾತಾಡಲು ಆಗುತ್ತಿರಲಿಲ್ಲ. ವೈದ್ಯರು ಸಹಾ ಬಹಳ ಕಾಳಜಿ ವಹಿಸಿದರು. ಆಸ್ಪತ್ರೆಗೆ ಬಂದ ಮರು ಕ್ಷಣವೇ ವೈದ್ಯರು ಚಿಕಿತ್ಸೆ ಆರಂಭ ಮಾಡಿದರು. ಅವರ ಆರೈಕೆ, ದೇವರ ದಯೆಯ ಫಲವಾಗಿ ನಾನೀಗ ನಿಮ್ಮೆಲ್ಲರ ಜತೆ ನಿರಾಯಾಸವಾಗಿ ಮಾತನಾಡುತ್ತಿದ್ದೇನೆ ಎಂದು ಹೆಚ್ಡಿಕೆ ಭಾವುಕರಾದರು.

ಪ್ರತಿ ಕುಟುಂಬಗಳಲ್ಲೂ ಆರೋಗ್ಯದ ಸಮಸ್ಯೆಗಳು ಇದ್ದೇ ಇರುತ್ತವೆ. ಬಡವ ಬಲ್ಲಿದ ಯಾರೇ ಆಗಿರಲಿ, ಅನಾರೋಗ್ಯ ಕಾಣಿಸಿಕೊಂಡಾಗ ಅಸಡ್ಡೆ ಬೇಡ. ಬಹಳ ಕಾಳಜಿ ಇರಲಿ, ಗೋಲ್ಡನ್ ಪಿರಿಯಡ್ ಬಗ್ಗೆ ಗಮನ ಇರಲಿ. ವೈಯಕ್ತಿಕವಾಗಿ ನನಗೆ ಇದು ಮೂರನೆಯ ಘಟನೆ. ಭಗವಂತ ನನಗೆ ಕೊಟ್ಟಿರುವ ಮೂರನೇ ಜನ್ಮ ಇದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸ್ವಲ್ಪ ತಡ ಮಾಡಿದ್ದರೂ ನಾನು ಮೂರ್ನಾಲ್ಕು ತಿಂಗಳು ಹಾಸಿಗೆ ಹಿಡಿಯಬೇಕಿತ್ತು. ಆದರೆ ವೈದ್ಯರ ಪರಿಶ್ರಮದಿಂದ ಮತ್ತೆ ಮೊದಲಿನ ಸ್ಥಿತಿಗೆ ಬಂದಿದ್ದೇನೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಎರಡು ಸಲ ಹೃದಯ ಚಿಕಿತ್ಸೆಗೆ ಒಳಗಾದವನು ನಾನು. ಎರಡನೇ ಸಲ ಸಿಎಂ ಆಗಿದ್ದೆ. ಅಂದು ವಾಲ್ಮೀಕಿ ಜಯಂತಿಯ ದಿನ. ಮಾದ್ಯಮ ಒಂದರಲ್ಲಿ ಒಂದು ಕಾರ್ಯಕ್ರಮ ಪ್ರಸಾರ ಆಗುತ್ತಿತ್ತು. “ಕರ್ನಾಟಕವನ್ನು ಕತ್ತಲೆಗೆ ತಳ್ಳಿದ ಕುಮಾರ” ಎಂಬ ಶೀರ್ಷಿಕೆಯ ಕಾರ್ಯಕ್ರಮ ಅದು. ಆಗ ನನ್ನ ಮನಸ್ಸಿಗೆ ಆಘಾತವಾಗಿ ಹೃದಯದ ಮೇಲೆ ತೀವ್ರ ಒತ್ತಡ ಉಂಟಾಗಿತ್ತು ಎಂದು ಅವರು ಹಳೆಯ ಘಟನೆಯನ್ನು ನೆನಪು ಮಾಡಿಕೊಂಡರು.

ಹೀಗಾಗಿ ನಾನು ನಾಡಿನ ಜನತೆಗೆ ಮನವಿ ಮಾಡುವುದು ಇಷ್ಟೇ. ಇಂತಹ ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ. ಹಣದ ಬಗ್ಗೆ ಚಿಂತೆ ಮಾಡಬೇಡಿ, ಮೊದಲು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿ. ನಾನು ಬೆಳಗ್ಗೆ ಹೋಗೋಣ, ನೋಡೋಣ ಅಂತ ನಿರ್ಲಕ್ಷ್ಯ ಮಾಡಿದ್ದಿದ್ದರೆ ಜೀವನಪೂರ್ತಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಬರುತ್ತಿತ್ತು ಎಂದು ಅವರು ತಿಳಿಸಿದರು.

ಇವತ್ತು ಚಂದ್ರಯಾನ, ಸೂರ್ಯಯಾನ ಮಾಡಿದ್ದೇವೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧಿಸಿದ್ದೇವೆ. ಕರ್ನಾಟಕದಲ್ಲಿ ಅತ್ಯಂತ ನುರಿತ, ಪ್ರತಿಭಾವಂತ, ಶ್ರೇಷ್ಠ ವೈದ್ಯರು ಇದ್ದಾರೆ. ಎಲ್ಲರೂ ಜಾಗೃತರಾಗಿ ಇರಬೇಕು ಎಂಬುದು ನನ್ನ ಮನವಿ ಎಂದು ಕುಮಾರಸ್ವಾಮಿ ಅವರು ಕಳಕಳಿಯಾಗಿ ಕೋರಿದರು.

Related posts