ಕೋರ್ಟ್ ಹೆಸರಲ್ಲಿ ನಡೆಯಿತೇ ವಂಚನೆ; ಚೈತ್ರಾ ಪರ ವಾದ ಮಂಡಿಸದಂತೆ ಬಾರ್ ಕೌನ್ಸಿಲ್‌ಗೆ ಮನವಿ

ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚಿಸಿರುವ ಆರೋಪದಲ್ಲಿ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪರವಾಗಿ ವಾದ ಮಂಡಿಸಬಾರದೆಂದು ಒತ್ತಾಯಿಸಿ ಬಾರ್ ಕೌನ್ಸಿಲ್‌ಗೆ ಮನವಿ ಸಲ್ಲಿಕೆಯಾಗಿದೆ.

ರಾಜ್ಯ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಯೂನಿಯನ್ ಅಧ್ಯಕ್ಷ ಮಾರ್ಕ್ ಆಂತೋನಿ ಅವರು ಕರ್ನಾಟಕ ಬಾರ್ ಕೌನ್ಸಿಲ್ ಹಾಗೂ ಬೆಂಗಳೂರು ವಕೀಲರ ಸಂಘಕ್ಕೆ ಮನವಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಜಡ್ಜುಗಳ ಹೆಸರಲ್ಲಿ ವಂಚಿಸಿರುವ ಬಗ್ಗೆ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ IPC 1860 (U/s-406, 419, 420, 170, 506, 120B)ರಡಿ ದೂರು ದಾಖಲಾಗಿದ್ದು, Crime No: 0206/2023 ಪ್ರಕರಣದಲ್ಲಿ ನ್ಯಾಯಾಲಯದ ಗೌರವಕ್ಕೆ ಚ್ಯುತಿ ತಂದಿರುವ ಆರೋಪಿಗಳ ಪರವಾಗಿ ವಾದಿಸದಂತೆ ಮಾನ್ಯ ವಕೀಲರಿಗೆ ಸೂಚಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರಿವ ದೂರಿನಲ್ಲಿ, ಚೈತ್ರಾ ಕುಂದಾಪುರ, ಗಗನ್ ಕಡೂರು ಹಾಗೂ ಮತ್ತಿತರರು ತಾವು ಪ್ರಧಾನಿ ಕಚೇರಿಯಲ್ಲೂ ಪ್ರಭಾವಿಯಾಗಿದ್ದು, ಸುಪ್ರೀಂ ಕೋರ್ಟ್ ಜಡ್ಜುಗಳಿಗೂ ಆಪ್ತರಾಗಿದ್ದು ಅವರೆಲ್ಲರ ಪ್ರಭಾವ ಬಳಸಿ ಟಿಕೆಟ್ ಕೊಡಿಸುತ್ತೇವೆ ಎಂದು ಸಂತ್ರಸ್ತರಿಗೆ ಭರವಸೆ ನೀಡಿ 5 ಕೋಟಿ ರೂಪಾಯಿ ಪಡೆದಿರುತ್ತಾರೆ. ಹಾಗೂ ಪ್ರಧಾನಿ ಕಚೇರಿ ಅಧಿಕಾರಿಗಳಂತೆ ಹಾಗೂ ಜಡ್ಜುಗಳ ಸಹಾಯಕರಂತೆ ನಟಿಸಿ, ನಾಟಕವಾಡಿ, ಸರ್ಕಾರಿ ವಸತಿಗೃಹಗಳನ್ನು ಬಳಸಿ ವಂಚನೆ ಎಸಗಿರುತ್ತಾರೆ ಎಂದು FIRನಲ್ಲಿ ಉಲ್ಲೇಖವಾಗಿರುತ್ತದೆ ಎಂದು ಈ ಮನವಿಯಲ್ಲಿ‌ ಬಾರ್ ಕೌನ್ಸಿಲ್‌ನ ಗಮನಸೆಳೆದಿದ್ದಾರೆ.

ಸುಪ್ರೀಂಕೋರ್ಟ್’ನ ಜಡ್ಜುಗಳ ಹೆಸರಲ್ಲಿ ಹಾಗೂ ಪ್ರಧಾನಿ ಮತ್ತಿತರ ಅಧಿಕಾರಿಗಳ ಹೆಸರಿನಲ್ಲಿ ವಂಚನೆ ನಡೆದಿರುವುದರಿಂದ ನ್ಯಾಯಾಲಯದ ಘನತೆಗೆ ಚ್ಯುತಿ ಆಗಿರುತ್ತದೆ. ಹಾಗಾಗಿ ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವವರೆಗೂ ಯಾವ ವಕೀಲರೂ ಆರೋಪಿಗಳ ಪರವಾಗಿ ವಾದ ಮಂಡಿಸುವುವುದು ಸೂಕ್ತವಲ್ಲ. ಒಂದು ವೇಳೆ ಆರೋಪಿಗಳು ಬಿಡುಗಡೆಯಾದಲ್ಲಿ ಸಾಕ್ಷಿಗಳನ್ನು ನಾಶಪಡಿಸುವ ಸಾದ್ಗ್ಯತೆಗಳಿದ್ದು, ಮುಂದೆ ಅದೇ ರೀತಿಯಲ್ಲಿ ನ್ಯಾಯಾಲಯಕ್ಕೆ ಅಪಚಾರವಾಗುವ ಮತ್ತಷ್ಟು ಕೃತ್ಯಗಳು ನಡೆಯುವ ಸಾಧ್ಯತೆಗಳಿವೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ತನಿಖೆ ಪೂರ್ಣವಾಗುವವರೆಗೂ ಆರೋಪಿಗಳ ಪರವಾಗಿ ವಾದ ಮಂಡಿಸಬಾರದೆಂಬ ನಿರ್ಣಯ ಕೈಗೊಂಡು ಗೌರವಾನ್ವಿತ ವಕೀಲರಿಗೆ ಸೂಚಿಸಬೇಕೆಂದು ಮಾರ್ಕ್ ಆಂತೋನಿ ಬಾರ್ ಕೌನ್ಸಿಲ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

Related posts