ದೊಡ್ಡಬಳ್ಳಾಪುರ: ಕ್ರೀಡೆ, ಶಿಕ್ಷಣದಲ್ಲಿ ಯಶಸ್ಸು ಗಳಿಸಲು ನಿರಂತರ ಅಭ್ಯಾಸ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಲು ಶೇ.೧೦೦ರಷ್ಟು ಪ್ರಯತ್ನಪಡಬೇಕು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ವಿದ್ಯಾನಿಧಿ ಸ್ವತಂತ್ರ ಪಿಯು ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ತೂಬಗೆರೆ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಶಾಸಕ ಚಾಲನೆ ನೀಡಿ ಮಾತನಾಡಿದರು. ಎಸ್.ಎಸ್.ಎಲ್.ಸಿ ನಂತರ ಪಿಯು ಕಾಲೇಜಿನಲ್ಲಿ ತಮಗೆ ಇಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಇದು ಮುಖ್ಯ ಘಟ್ಟವಾಗಿದೆ. ಕ್ರೀಡೆ, ಶಿಕ್ಷಣಕ್ಕೆ ಇದು ಸೂಕ್ತ ವಯಸ್ಸು. ಈ ಸಮಯದಲ್ಲಿ ಜಿಲ್ಲೆ, ರಾಜ್ಯ ,ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆ ಆಗಲು ನಿರಂತರವಾಗಿ ಪ್ರಯತ್ನಿಸಬೇಕು ಎಂದರು.
ಕ್ರೀಡೆಗಳಲ್ಲಿ ಒಗ್ಗಟ್ಟಾಗಿ ಭಾಗವಹಿಸಬೇಕು. ಕ್ರೀಡೆ, ಶಿಕ್ಷಣದಲ್ಲಿ ಸದಾ ಉತ್ತಮವಾಗಿರಬೇಕು. ತಾಲೂಕಿನಲ್ಲಿ ಪಿಯು ಫಲಿತಾಂಶ ಕಳೆದ ಕೆಲ ವರ್ಷಗಳಿಂದ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಕೊಂಡೊಯ್ಯಲು ಪ್ರಯತ್ನಿಸಬೇಕು. ಶೇ.೧೦೦ ರಷ್ಟು ಶ್ರಮವಹಿಸಬೇಕು. ಫಲಿತಾಂಶದ ಬಗ್ಗೆ ಗಮನ ಬೇಡ ಪ್ರಯತ್ನದ ಕಡೆಗೆ ಮಾತ್ರ ಗಮನವಿರಬೇಕು. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಕಾಲೇಜಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಚರ್ಚಿಸಲಾಗುತ್ತದೆ. ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ಮೊಬೈಲ್, ಟಿವಿ ಗಳಿಂದ ದೂರವಿರಬೇಕು ಎಂದರು.
ಪಿಯು ಇಲಾಖೆ ಉಪನಿರ್ದೇಶಕ ಪ್ರಮೋದ್ ಕುಲಕರ್ಣಿ ಮಾತನಾಡಿ ಕ್ರೀಡಾ ಕೂಟಗಳಲ್ಲಿ ತೀರ್ಪುಗಾರರ ತೀರ್ಪು ಅತ್ಯಂತ ನಿಖರವಾಗಿರಬೇಕು. ದೇಶದಲ್ಲಿ ಕ್ರೀಡೆಗೆ ಅವಕಾಶ ಕಡಿಮೆಯಿದೆ. ಆದರೂ ಚಿನ್ನ ,ಬೆಳ್ಳಿ ಗಳನ್ನು ಒಲಂಪಿಕ್ ನಲ್ಲಿ ಗೆಲ್ಲುತ್ತೀದ್ದೇವೆ. ಎಲ್ಲರಿಗೂ ಕ್ರೀಡೆಯಲ್ಲಿ ಭಾಗವಹಿಸಲು
ಕ್ರೀಡಾ ಮನೋಭಾವನೆ ಇರಬೇಕು. ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಪ್ರಯತ್ನ ಮುಖ್ಯವಾಗಿರುತ್ತದೆ ಎಂದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುನಿಲ್ ನಾಯ್ಕ್, ವಿದ್ಯಾನಿಧಿ ಪಿಯು ಕಾಲೇಜಿನ ಪ್ರಾಂಶುಪಾಲ ರಂಗನಾಥ, ಮುಖಂಡರಾದ ಅಶ್ವಥ್ ಕುಮಾರ್, ಗೋವಿಂದರಾಜು ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.