ದೆಹಲಿ: ಕಾವೇರಿ ನದಿ ನೀರು ವಿವಾದ ಕುರಿತಂತೆ ಕರ್ನಾಟಕ ಸಂಸದರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚರ್ಚೆ ನಡಿಸಿದ್ದಾರೆ. ತಮಿಳುನಾಡಿಗೆ ನೀರು ಹರಿಸಬೇಕೆಂಬ ಪ್ರಾಧಿಕಾರದ ಆದೇಶದಿಂದ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಕರ್ನಾಟಕ ಸರ್ಕಾರ, ಪರಿಸ್ಥಿತಿ ನಿಭಾಯಿಸಲು ಹಾಗೂ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆರುವ ಸಂಬಂಧ ಈ ಸಭೆ ನಡೆಸಿದೆ.
ಸಂಸದರ ಸಭೆಗೆ ಮುನ್ನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಕಾವೇರಿ ನೀರು ವಿಚಾರದಲ್ಲಿ ಕರ್ನಾಟಕದ ಸಂಕಷ್ಟ ಕುರಿತು ಸಮಾಲೋಚನೆ ನಡೆಸಿದರು. ದೆಹಲಿಯಲ್ಲಿನ ಕರ್ನಾಟಕ ಪ್ರತಿನಿಧಿ ಟಿ ಬಿ ಜಯಚಂದ್ರ, ಸಂಸದ ಡಿ.ಕೆ.ಸುರೇಶ್, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ಜಲ ಸಂಪನ್ಮೂಲ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕರ್ನಾಟಕ ಭವನ ರೆಸಿಡೆಂಟ್ ಕಮಿಷನರ್ ಇಂಕೊಂಗ್ಲಾ ಜಮೀರ್ ಸೇರಿದಂತೆ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.