ಬೆಂಗಳೂರು: ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್ ಮಾಡಲು ವಿವಿಧ ಸಂಘಟನೆಗಳ ತೀರ್ಮಾನ ಬೆಂಬಲಿಸಲು ಕನ್ನಡ ಪರ ಸಂಘಟನೆಗಳು ಜನತೆಗೆ ಮನವಿ ಮಾಡಿವೆ.
ಕಾವೇರಿ ನೀರು ತಮಿಳುನಾಡಿಗೆ ತಮಿಳುನಾಡಿಗೆ ಹರಿಸಿ ಕುಡಿಯುವ ನೀರಿಗು ಸಮಸ್ಯೆ ಉಂಟಾಗುತ್ತಿರುವ ಕಾರಣ ಇದೇ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ಗೆ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಸಬೇಕು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಇಂದು ವಿವಿಧ ಕನ್ನಡಪರ ,ರೈತಪರ ಸಂಘಟನೆಗಳ ಮುಖಂಡರುಗಳ ಸಭೆಯಲ್ಲಿ ಚರ್ಚಿಸಿ ಸಭೆಯ ತೀರ್ಮಾನವನ್ನು ಪ್ರಕಟಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರರು ತಮಿಳುನಾಡಿಗೆ ನೀರು ಹರಿಸುವ ಸಂಬಂಧ ನೀಡಿರುವ ತೀರ್ಪಿಗೆ ಸಭೆಯಲ್ಲಿ ಎಲ್ಲಾ ಸಂಘಟನೆಗಳ ಮುಖಂಡರುಗಳು ಖಂಡನೆ ವ್ಯಕ್ತಪಡಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸರ್ಕಾರವೇ ಈಗಾಗಲೇ ಬರ ಘೋಷಣೆ ಮಾಡಿದೆ. ರೈತರು ಬೆಳೆದ ಬೆಳೆಗಳಿಗೆ ನೀರು ಇರಲಿ, ರಾಜ್ಯದ ಜನರು ಕುಡಿಯುವ ನೀರಿಗೂ ಪರಿತಪಿಸುವ ಪರಿಸ್ಥಿತಿ ಇದೆ ಎಂದು ನಿರು ಹರಿಸುವುದು ಮುಂದುವರಿದರೆ ಬೆಂಗಳೂರಿನ ಕುಡಿಯುವ ನೀರು ಗಂಡಾಂತರ ಬರುತ್ತದೆ .ಕಾವೇರಿ ಅಚ್ಚುಕಟ್ಟಿನ ಪ್ರದೇಶದಲ್ಲಿ ಬಳಸುವ ನೀರಿನ ಪ್ರಮಾಣದ ಅರ್ಧದಷ್ಟು ಭಾಗದ ನೀರನ್ನು ಬೆಂಗಳೂರು ಜನರು ಕುಡಿಯುವ ನೀರಿಗಾಗಿ ಬಳಸುತ್ತಿದ್ದಾರೆ. ಆದರೂ ಬೆಂಗಳೂರು ಜನರು ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿರುವ ಸಂಬಂಧ ರೈತರು ಕಳೆದ 45 ದಿನಗಳಿಂದ ಅವಿರತವಾಗಿ ಹೋರಾಟ ನಡೆಸುತ್ತಿದ್ದರೂ ಬೆಂಗಳೂರು ಜನರು ಮಾತ್ರ ಸುಮ್ಮನಿದ್ದಾರೆ.
ಸರ್ಕಾರ ವಚನಭ್ರಷ್ಟ ಸರ್ಕಾರವಾಗಿದೆ. ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎನ್ನುತ್ತದೆ ಆದರೆ ರಾತ್ರೋರಾತ್ರಿ ಕದ್ದುಮುಚ್ಚಿ ನೀರು ಬಿಟ್ಟು ರಾಜ್ಯದ ಜನರ ಮರಣ ಶಾಸನ ಬರೆಯುತ್ತಿದೆ ಎಂದು ಸರ್ಕಾರದ ನೀತಿಯನ್ನು ಖಂಡಿಸಿದರು.
ಕರ್ನಾಟಕದಲ್ಲಿ ಈಗಾಗಲೇ ಮಾನ್ಸೂನ್ ಮುಕ್ತಾಯದ ಹಂತಕ್ಕೆ ಬಂದಿದೆ. ತಮಿಳುನಾಡಿನಲ್ಲಿ ಈಗ ನಾರ್ಥ್ ಈಸ್ಟ್ ಮಾನ್ಸೂನ್ ಆರಂಭವಾಗುತ್ತಿದೆ. ತಮಿಳುನಾಡಿನವರು ತಮ್ಮ ಬೆಳೆ ರಕ್ಷಣೆಗಾಗಿ ನಮ್ಮ ಕರ್ನಾಟಕದ ನೀರನ್ನು ಕೇಳುತ್ತಿದ್ದಾರೆ. ಆದರೆ ನಮಗೆ ಈಗಲೇ ಕುಡಿಯುವ ನೀರಿನ ಸಮಸ್ಯೆ ಕಾಣುತ್ತಿದೆ ಎಂದರು.
ಸುಪ್ರೀಂಕೋರ್ಟ್ ಸಹ ಕುಡಿಯುವ ನೀರಿಗೆ ಮೊದಲ ಆದ್ಯತೆಯನ್ನು ನೀಡಬೇಕು ಹೇಳುತ್ತದೆ.ಈ ಹಿನ್ನೆಲೆಯಲ್ಲಿ ಕಾವೇರಿ ನೀರನ್ನು ಉಳಿಸಬೇಕಾದುದ್ದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಆದೇಶ ಉಲ್ಲಂಘನೆ ಮಾಡಬಾರದೆಂದು ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದರು.
ಈ ಸಂಬಂಧ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇದೇ ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ ಎಂದು ಸಭೆಯಲ್ಲಿ ಭಾಗಿಗಳಾಗಿದ್ದ 150ಕ್ಕೂ ಹೆಚ್ಚು ಸಂಘಟನೆಗಳ ಅಭಿಪ್ರಾಯವನ್ನು ಕೇಳಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಈ ಬಂದ್ ಕೇವಲ ಸಂಘ ಸಂಸ್ಥೆಗಳ ಬಂದ್ ಅಲ್ಲ ಎಲ್ಲಾ ಜನ ಸಾಮಾನ್ಯರ ಬಂದಾಗಿದೆ. ಕಾವೇರಿ ನೀರು ಕುಡಿಯುವ ಪ್ರತಿಯೊಬ್ಬರೂ ಈ ಬಂದ್ ನಲ್ಲಿ ಭಾಗವಹಿಸುವ ಮೂಲಕ ಬಂದ್ ಯಶಸ್ವಿಯಾಗಿ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸೊಣ ಎಂದು ಕರೆ ನೀಡಿದರು.
ಈ ಬಂದ್ ಗೆ ಎಲ್ಲಾ ಸಂಘಟನೆಗಳ ಜೊತೆಗೆ ಸಿನಿಮಾ ಉದ್ಯಮ ಆಟೋ ರಿಕ್ಷಾ, ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು, ಐಟಿ-ಬಿಟಿ ಕಂಪನಿಯವರು, ವಿದ್ಯಾಸಂಸ್ಥೆಯವರು, ಅಪಾರ್ಟ್ಮೆಂಟ್ ಸಂಘ ಸಂಸ್ಥೆಗಳು ಖಾಸಗಿ ಕಾರ್ಖಾನೆಯವರು, ಕೈಗಾರಿಕೆಗಳು ವರ್ತಕರು ಹೋಟೆಲ್ ಉದ್ಯಮಿದಾರರು ಅಂಗಡಿ ಮಾಲೀಕರುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಬೇಕೆಂದು ಕೋರಿದರು.
ಅಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕಾವೇರಿ ಸಮಸ್ಯೆ ಇಂದು ನೆನ್ನೆಯದಲ್ಲ ಸ್ವಾತಂತ್ರ್ಯ ಪೂರ್ವದಿಂದಲೂ ಇರುವಂತಹದು. ಸರ್ಕಾರದ ಬೇಜವಾಬ್ದರಿತನದಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ ಎಂದು ಸರ್ಕಾರದ ನಡೆಯನ್ನು ಖಂಡಿಸಿದರು.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದರೆ ಹೆಚ್ಚೆಂದರೆ ಛೀಮಾರಿ ಹಾಕುತ್ತದೆ ಇಲ್ಲವೇ ಜೈಲು ಶಿಕ್ಷೆ ವಿಧಿಸುತ್ತದೆ. ಬರೀ ಮುಖ್ಯಮಂತ್ರಿ ಯಾಕೆ ಇಡೀ ಮಂತ್ರಿ ಮಂಡಲವೇ ರಾಜೀನಾಮೆ ನೀಡಿ ಜೈಲಿಗೆ ಹೋಗಲಿ ಹಾಗಾದರೂ ರಾಜ್ಯದ ಜನತೆಗೆ ತಾವು ಮಾಡಿರುವ ಪಾಪ ಕಡಿಮೆ ಆಗುತ್ತದೆ ಎಂದರು.
ರಾಜ್ಯದ ರೈತರ ಮತ್ತು ಜನರ ಸಮಸ್ಯೆಗಳನ್ನು ಸರ್ಕಾರ ಮರೆತಂತ್ತಿದೆ. ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ಇಂದು 96 ಅಡಿಗಳಿಗೆ ಇಳಿದಿದೆ. ಇದರಲ್ಲಿ ಕೆಳ ಅಡಿಗಳಷ್ಟು ನೀರು ಡೆಡ್ ಸ್ಟೋರೇಜ್ (ಕುಡಿಯಲು ಯೋಗ್ಯವಲ್ಲದ ನೀರು) ಆಗಿದೆ. ಪ್ರಸ್ತುತ ಇರುವ ನೀರು ಸಹ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗುವ ಸಂಭವವಿದೆ ಎಂದರು.
ನಿರ್ವಾಹಣಸಮಿತಿ, ಕಾವೇರಿ ಪ್ರಾಧಿಕಾರ, ಸುಪ್ರೀಂ ಕೋರ್ಟ್ ಸಹ ತಮಿಳುನಾಡಿನ ಪರವಾಗಿ ಸದಾ ತೀರ್ಪನ್ನು ಕೊಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿ ಚಂದ್ರು, ರಾಜ್ಯದ ಪರ ವಕೀಲರು ಸಮರ್ಥವಾಗಿ ವಾದವನ್ನು ಮಂಡನೆ ಮಾಡದ್ದರ ಫಲವಾಗಿ ಇಂದು ರಾಜ್ಯದ ಜನರು ಪರಿತಪಿಸುವಂತಾಗಿದೆ ಎಂದರು.
ಡಿಕೆಶಿ ರವರು ಮೇಕೆದಾಟು ಅಣೆಕಟ್ಟುಗಾಗಿ ಪಾದಯಾತ್ರೆ ನಡೆಸಿದರು. ಅಧಿಕಾರಕ್ಕೆ ಬಂದ ಮೇಲೆ ಅದರ ಬಗ್ಗೆ ಮಾತನಾಡದೇ ಮೌನ ವಹಿಸಿದ್ದಾರೆ ಎಂದು ಕಿಡಿಕಾರಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಬಯಲು ಸೀಮೆಯ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಮಾತನಾಡಿ, ನಮ್ಮ ದೇಶದ ಕಾನೂನು ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂದು, ಇದಾದ ಬಳಿಕ ಕೃಷಿ, ಕೈಗಾರಿಕೆ ಬಳಕೆಗೆ ಎಂದು ಹೇಳುತ್ತದೆ. ಪ್ರಸ್ತುತ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೂ ಕೂಡ ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಬಿಡಲು ಸಾಧ್ಯವಿಲ್ಲ ಎಂದರು. ಇದಕ್ಕಾಗಿ ನಾವು ಹೋರಾಟ ಮಾಡಬೇಕು ಎಂದರು.
ಕಾವೇರಿ ಹೋರಾಟಕ್ಕೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮನವೊಲಿಸುವ ಪ್ರಯತ್ನ ಮಾಡಿ ಅವರನ್ನು ಚಳುವಳಿಗೆ ಧುಮುಕುವಂತೆ ಮಾಡಬೇಕು ಎಂದು ಕರೆ ನೀಡಿದರು.
ಬೆಂಗಳೂರು ನಗರದ ರಾಜಸ್ಥಾನಿ ವ್ಯಾಪಾರಸ್ಥರ ಪರವಾಗಿ ವಿಜಯಸಿಂಗ್ ಮಾತನಾಡಿ, ನಾವು ಈ ರಾಜ್ಯದ ನೀರು ಕುಡಿದು ಬದುಕುತ್ತಿದ್ದೆವೆ. ನೀವು ಹೋರಾಟಗಾರರು ಮಾಡೋ ಹೋರಾಟಕ್ಕೆ ನಾವು ಕೈ ಜೋಡಿಸುವ ಮೂಲಕ ಈ ರಾಜ್ಯದ ಋಣ ತೀರಿಸಲು ಬದ್ಧರಾಗಿದ್ದೇವೆ ಎಂದರು.
ಕನ್ನಡ ಪರ ಹೋರಾಟಗಾರ ವಿಜಯಕುಮಾರ್ ಮಾತನಾಡಿ, ನಾವು ಈಗಾಗಲೇ ಕನ್ನಡ ನಾಡು ನುಡಿಗಾಗಿ ಹೋರಾಟವನ್ನು ಮಾಡಿದ್ದೇವೆ. ಈಗ ಕಾವೇರಿ ನೀರಿಗಾಗಿ ಕೂಡ ಹೋರಾಟ ಮಾಡೊಣ ಎಂದರು. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೈ ಜೋಡಿಸೊಣ ಎಂದು ಕರೆ ನೀಡಿದರು.
ಕರ್ನಾಟಕ ತಮಿಳು ಭಾಷೆ ಸಂಘದ ಅಧ್ಯಕ್ಷ ಮುತ್ತುಮಣಿ ಮಾತನಾಡಿ, ನಾವು ಈ ರಾಜ್ಯದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ತಮಿಳು ಜನರು ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕ ಪರವಾಗಿದ್ದೇವೆ ಎಂದು ಘೋಷಿಸಿದರು.
ಕೋಲಾರದ ಮಾಜಿ ಲೋಕಸಭಾ ಸದಸ್ಯರಾದ ವೆಂಕಟೇಶ್ ಮಾತನಾಡಿ, ಕೇಂದ್ರದಲ್ಲಿ ನಮ್ಮ ರಾಜ್ಯದ ಸಂಸದರೇ ರೈಲ್ವೆ ಮಂತ್ರಿಯಾಗಿದ್ದರೂ ರಾಜ್ಯಕ್ಕೆ ಸರಿಯಾಗಿ ರೈಲು ವ್ಯವಸ್ಥೆ ಮಾಡಿರಲಿಲ್ಲ. ಆಗ ನಾನು ಹೋರಾಟ ನಡೆಸಿ ರೈಲ್ವೆ ವ್ಯವಸ್ಥೆಗೆ ಶ್ರಮಿಸಿದೆ. ಈಗಲೂ ಕೂಡ ಕಾವೇರಿ ನೀರಿನ ವಿಚಾರದಲ್ಲೂ ಸಂಘಟಿತರಾಗಿ ಹೋರಾಟ ಮಾಡೋಣ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳ ಮುಖಂಡರುಗಳು ಕಾವೇರಿ ನೀರಿನ ಹೋರಾಟದ ಬಗ್ಗೆ ತಮ್ಮ ಸಲಹೆ, ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಜಯ ಕರ್ನಾಟಕ ಜನಪರ ವೇದಿಕೆಯ ಕುಮಾರಸ್ವಾಮಿ ಮಾತನಾಡಿ, ನಾವು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ತನಕ ಹೋರಾಟ ಮಾಡಿದಾಗ ಸ್ವತಃ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ನಮ್ಮ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಲು ಬರುವಂತೆ ಮಾಡಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಕನ್ನಡ ಚಳುವಳಿ ನಾಯಕ ಗುರುದೇವ್ ನಾರಾಯಣ್ ರಾಜ್ಯ ರೈತ ಸಂಘದ ಪುಟ್ಟಸ್ವಾಮಿ , ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್, ಅಮ್ಮಾ ಆದ್ವಿ ಪಕ್ಷದ ಬೆಂಗಳೂರು ಅಧ್ಯಕ್ಷ ದಾಸರಿ ಮೋಹನ್ ಉಷಾ ಮೋಹನ್, ರಾಜಸ್ಥಾನದ ವ್ಯಾಪಾರಸ್ಥರ ಪರವಾಗಿ ವಿಜಯಸಿಂಗ್ ಇನ್ನು ಮುಂತಾದ ವಿವಿಧ ಕನ್ನಡ ಪರ ಸಂಘಟನೆಗಳ 150ಕು ಹೆಚ್ಚು ಮುಖಂಡರುಗಳು ಭಾಗವಹಿಸಿದ್ದರು.