ಪಿಯುಸಿ ಮೌಲ್ಯಮಾಪಕರಿಗೆ ಸಿಗದ ಸಂಭಾವನೆ, ಭತ್ಯೆ.. ವಿಳಂಬ ನೀತಿ ವಿರುದ್ಧ ರಂಗನಾಥ್ ಆಕ್ರೋಶ.. ಅಕ್ಟೊಬರ್ ೩ ರಂದು ಪ್ರತಿಭಟನೆ ನಡೆಸುವ ಎಚ್ಚರಿಕೆ
ಬೆಂಗಳೂರು: ಕಳೆದ ಮಾರ್ಚ್-ಏಪ್ರಿಲ್’ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಮತ್ತು ಮೌಲ್ಯಮಾಪನ ಕಾರ್ಯ, ಜೂನ್’ನಲ್ಲಿ ನಡೆದ ಮೊದಲ ಪೂರಕ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯ ಹಾಗೂ ಆಗಸ್ಟ್-ಸೆಪ್ಟೆಂಬರ್’ನಲ್ಲಿ ನಡೆದ 2ನೇ ಪೂರಕ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಲ್ಲಿ ಭಾಗಿಯಾದ ಉಪನ್ಯಾಸಕರ ಸಂಭಾವನೆ ಮತ್ತು ಭತ್ಯೆಗಳನ್ನು ಈವರೆಗೂ ಸಂಪೂರ್ಣವಾಗಿ ಬಿಡುಗಡೆ ಮಾಡದಿರುವ ಬಗ್ಗೆ ಬೆಂಗಳೂರು ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷರೂ ಆದ ಹಿರಿಯ ವಕೀಲ ಎ.ಪಿ.ರಂಗನಾಥ್ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಎ.ಪಿ.ರಂಗನಾಥ್, ಜರೂರಾಗಿ ಮೌಲ್ಯಮಾಪನ ಮಾಡಿಸಿ, ಶೀಘ್ರದಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದೇವೆಂದು ಹೆಮ್ಮೆ ಪಡುವ ಮಂಡಲಿಯು ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಮಂಡಲಿಯ ಹಿರಿಮೆ ಮತ್ತು ಯಶಸ್ಸಿಗೆ ಕಾರಣೀಭೂತರಾದ ಉಪನ್ಯಾಸಕರ ಸಂಭಾವನೆ ಮತ್ತು ಭತ್ಯೆಗಳ ಶೀಘ್ರ ಬಿಡುಗಡೆಗೂ ಇದೇ ಇಚ್ಛಾಶಕ್ತಿ ಪ್ರದರ್ಶಿಸಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಮೌಲ್ಯಮಾಪನದ ಕಡೆಯ ದಿನದಂದೆ ಚೆಕ್ ಮೂಲಕ ಉಪನ್ಯಾಸಕರಿಗೆ ಸಂಭಾವನೆ ಮತ್ತು ಭತ್ಯೆಗಳನ್ನು ವಿತರಿಸಲಾಗುತ್ತಿತ್ತು. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಪರೀಕ್ಷಾ ಶುಲ್ಕವನ್ನು ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ ಉಪನ್ಯಾಸಕರಿಗೆ ವಿತರಿಸಲೇಕೆ ಈ ವಿಳಂಬ ಧೋರಣೆ? ಎಂದಿದ್ದಾರೆ.
ವಿಶೇಷವಾಗಿ ಖಾಸಗಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರು ಮೌಲ್ಯಮಾಪನದ ಸಂಭಾವನೆ ಮತ್ತು ಭತ್ಯೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಅನೇಕರು ನನ್ನ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದು ಅವರ ಜೀವನ ನಿರ್ವಹಣೆಯ ಪ್ರಶ್ನೆಯೂ ಆಗಿರುತ್ತದೆ ಎಂಬುದನ್ನು ಎ.ಪಿ.ರಂಗನಾಥ್ ಅವರು ಈ ಪತ್ರದಲ್ಲಿ ಮಂಡಳಿಯ ಗಮನಸೆಳೆದಿದ್ದಾರೆ.
ಎಲ್ಲಾ ಉಪನ್ಯಾಸಕರ ವಾರ್ಷಿಕ ಮತ್ತು ಪೂರಕ ಪರೀಕ್ಷೆಗಳ ಸಂಭಾವನೆ ಹಾಗೂ ಭತ್ಯೆಗಳನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸರುವ ಎ.ಪಿ.ರಂಗನಾಥ್, ಒಂದುವೇಳೆ ಇದೇ ವಿಳಂಬ ನೀತಿಯನ್ನು ಮುಂದುವರಿಸಿದಲ್ಲಿ ಅಕ್ಟೋಬರ್ 3 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮುಂದೆ ಪ್ರತಿಭಟನೆ ನಡೆಸುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.