ಪೊಲೀಸರಿಗೆ ‘ಇಲಿ ಬಿರಿಯಾನಿ’? ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ವಿರುದ್ದ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಇಲಾಖೆ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ. ಬೆಂಗಳೂರು ಸೇರಿದಂತೆ ಅನೇಕ‌ ನಗರಗಳಲ್ಲಿ ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಹೊಟೇಲ್ ಹಾಗೂ ಆಹಾರ ಮಳಿಗೆಗಳು ಕಳಪೆ ಆಹಾರ ಮಾರಾಟ ಮಾಡುತ್ತಿರುವ ಬಗ್ಗೆ ಸಾಮಾಜಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ.

ಬಹುತೇಕ ಹೊಟೇಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಚೈನಾ ಸಾಲ್ಟ್ ಬಳಕೆ ಮಾಡುತ್ತಿರುವುದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.ಈ ಟೇಸ್ಟಿಂಗ್ ಪೌಡರ್ ಅವಾಂತರಗಳು ಒಂದೆಡೆಯಾದರೆ ಇತ್ತ ‘ಇಲಿ ಬಿರಿಯಾನಿ’ ಕಥೆ ಪೊಲೀಸರನ್ನೇ ಗಲಿಬಿಲಿಗೊಳಿಸಿದೆ.

ಇದು ನಿರ್ಲಕ್ಷ್ಯದ ಪರಿಣಾಮವೋ ಗೊತ್ತಿಲ್ಲ, ಮಂಗಳವಾರ ಬೆಂಗಳೂರು ಬಂದ್ ಸಂದರ್ಭದಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಪೂರೈಕೆಯಾದ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂಬ ಸುದ್ದಿಯು ತಲ್ಲಣದ ತರಂಗ ಎಬ್ಬಿಸಿದೆ.

ಈ ಕುರಿತ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್ ವ್ಯಕ್ತವಾಗುತ್ತಿದೆ. ಈ ಕುರಿತಂತೆ ಪ್ರತಿಪಕ್ಷ ಬಿಜೆಪಿ ಕೂಡಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದ ATM ಸರ್ಕಾರದ ಭ್ರಷ್ಟಾಚಾರ ತಂದೊಡ್ಡುತ್ತಿರುವ ದುರಂತ ಒಂದೆರಡಲ್ಲ’ ಎಂದಿದೆ.

ಪೊಲೀಸರಿಗೆ ಈಗಾಗಲೇ ವೇತನ ನೀಡದೇ ಸತಾಯಿಸುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಪೊಲೀಸರಿಗೆ ತಿನ್ನಲು ಸತ್ತ ಇಲಿ ಬಿದ್ದ ಊಟ ವಿತರಿಸುತ್ತಿದೆ ಎಂದು ದೂರಿರುವ ಬಿಜೆಪಿ, ‘ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ಸೂಕ್ತ ಊಟದ ವ್ಯವಸ್ಥೆ ಕಲ್ಪಿಸಲೂ ಸಿದ್ದರಾಮಯ್ಯ ಸರ್ಕಾರ ಅಯೋಗ್ಯವಾಗಿದೆ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಇಂಥ ಘಟನೆಗಳು ಸರ್ಕಾರದಲ್ಲಿ ಎಲ್ಲಾ ಹಂತದಲ್ಲೂ ತುಂಬಿರುವ ಭ್ರಷ್ಟ ಇಲಿಗಳ ಪ್ರತಿರೂಪ.’ ಎಂದು ವೀಡಿಯೋವನ್ನು ಹಂಚಿಕೊಂಡಿದೆ.

Related posts