ಪರೀಕ್ಷೆಗಾಗಿ ಮಾತ್ರವೇ ತಾತ್ಕಾಲಿಕ ಮರುಹಂಚಿಕೆ; ಹೈಕೋರ್ಟ್ ಸ್ಪಷ್ಟನೆ; ಅ.09ರಂದು ಆದೇಶ ಸಾಧ್ಯತೆ

ಬೆಂಗಳೂರು: ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ವರ್ಗಾಯಿಸಲು ತಕ್ಷಣವೇ ಆದೇಶಿಸಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್ ವಿಭಾಗೀಯ ಪೀಠವು, ಕಳೆದ ವಿಚಾರಣೆ ವೇಳೆ ತಾತ್ಕಾಲಿಕವಾಗಿ ಪರೀಕ್ಷೆ ಸಂಬಂಧವಾಗಿ ಮಾತ್ರ ರೂಪುರೇಷೆ ಸಿದ್ಧಪಡಿಸಲು ನಿರ್ದೇಶನ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದೆ.

GRMCಗೆ NMC ಅನುಮತಿ ವಿಳಂಬ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿಯು ಸಲ್ಲಿಸಿರುವ ರಿಟ್ ಅರ್ಜಿ ಕುರಿತಂತೆ ನ್ಯಾಯಮೂರ್ತಿಗಳಾದ ಜಿ.ನರೇಂದ್ರ ಹಾಗೂ ವಿಜಯಕುಮಾರ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಇಂದು ವಿಚಾರಣೆಗೆ ಬಂತು. ಆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ತಮ್ಮನ್ನು ಬೇರೆ ಕಾಲೇಜಿಗೆ ಮರುಹಂಚಿಕೆ ಮಾಡಬೇಕೆಂದು ಕೋರಿರುವ ಅರ್ಜಿ ಕೂಡಾ ಈ ಪ್ರಕರಣದ ಜೊತೆಯಲ್ಲೇ ವಿಚಾರಣೆಗೆ ಬಂತು.

ಕಳೆದ ವಿಚಾರಣೆ ವೇಳೆ ನ್ಯಾಯಪೀಠ ನೀಡಿದ್ದ ನಿರ್ದೇಶನದಂತೆ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗಳಿಗೆ ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಮರುಹಂಚಿಕೆ ಮಾಡುವ KEA ಸಿದ್ಧಪಡಿಸಿರುವ ಪಟ್ಟಿಯನ್ನು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನ್ಯಾಯಪೀಠಕ್ಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಮತ್ತೊಂದು ರಿಟ್ ಪಿಟೀಷನ್ ಅರ್ಜಿದಾರರ ಪರ ವಕೀಲರು ಇದು ತಾತ್ಕಾಲಿಕ ಮರುಹಂಚಿಕೆಯೇ ಅಥವಾ ಶಾಶ್ವತ ಮರುಹಂಚಿಕೆಯ ಕ್ರಮವೇ ಎಂದು ಕೇಳಿದರು. ಈ ಕುರಿತಂತೆ ಸ್ಪಷ್ಟ ಪಡಿಸಿದ ನ್ಯಾಯಮೂರ್ತಿಗಳು ಇದು ತಾತ್ಕಾಲಿಕ ಕ್ರಮವಾಗಿದೆ ಎಂದು ಸ್ಪಷ್ಟನೆ ನೀಡಿದರು.

ಇದೇ ವೇಳೆ ಹಿರಿಯ ವಕೀಲರಾದ ನಾಗಾನಂದ್ ಅವರು ವಾದ ಮಂಡಿಸಿ ಬಹುತೇಕ ವಿದ್ಯಾರ್ಥಿಗಳು ಬೇರೆ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಒಲವು ಹೊಂದಿಲ್ಲ ಎಂದು ಎಂಬ ಸಂಗತಿಯನ್ನು ನ್ಯಾಯಾಲಯದ ಗಮನ ಸೆಳೆದರು. ವಾದ-ಪ್ರತಿವಾದದ ನಡುವೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು, ಧಾವೆ ಕುರಿತ ಮುಖ್ಯ ಅರ್ಜಿ ಇನ್ನೂ ಬಾಕಿ ಇದೆ. ಆದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಬರೆಯುವ ಉದ್ದೇಶಕ್ಕಷ್ಟೇ ತಾತ್ಕಾಲಿಕವಾಗಿ ನಿರ್ದೇಶನ ನೀಡಲಾಗಿದೆ ನ್ಯಾಯಪೀಠದ ಆದೇಶ ಬಗ್ಗೆ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಅದೇ ಸಂದರ್ಭದಲ್ಲಿ ಪರೀಕ್ಷಾ ಶುಲ್ಕ ಹಾಗೂ ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಿಗೆ ವರ್ಗಾಯಿಸುವ ಬಗ್ಗೆ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ವಕೀಲರಾದ ಬಗ್ಗೆ ಗರಂ ಆದ ನ್ಯಾಯಪೀಠ ಈ ವಿಚಾರ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪಿಸಬೇಕು ಎಂದ ಪ್ರಸಂಗವೂ ನಡೆಯಿತು.

ಈ ನಡುವೆ, ಪ್ರಕರಣ ಬಗ್ಗೆ ವಿಸ್ತೃತ ವಾದ ಮಂಡಿಸಲು ವಕೀಲರು ಅವಕಾಶ ಕೋರಿದ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಅಕ್ಟೊಬರ್ 9ಕ್ಕೆ ಮುಂದೂಡಿದೆ. ಪರೀಕ್ಷೆ ಸಂಬಂಧದ ತಾತ್ಕಾಲಿಕ ಮರುಹಂಚಿಕೆ ಕುರಿತು ನ್ಯಾಯಪೀಠ ಅಂದೇ ಆದೇಶ ಪ್ರಕಟಿಸುವ ಸಾಧ್ಯತೆ ಇದೆ.

Related posts