ಕಲಬುರಗಿ: PSI ನೇಮಕಾತಿ ಹಗರಣದ ಬೆನ್ನಲ್ಲೇ ರಾಜ್ಯ ಸರ್ಕಾರದ ಹುದ್ದೆಗಳಿಯೇ ನೇಮಕಾತಿಗಾಗಿ ಶನಿವಾರ ನಡೆದ ಪರೀಕ್ಷೆಯಲ್ಲೂ ನಕಲು ನಡೆದಿರುವ ಅಕ್ರಮವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಈ ಪ್ರಕರಣದಲ್ಲೂ PSI ಹಗರಣದ ಆರೋಪಿಯ ಹೆಸರು ಥಳುಕು ಹಾಕಿಕೊಂಡಿರುವುದು ಅಚ್ಚರಿಯ ಸಂಗತಿ.
ವಿವಿಧ ನಿಗಮ ಮಂಡಳಿಗಳ FDA ಹುದ್ದೆಗಳಿಗೆ ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಫ್ಡಿಎ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ್ದ ಆರೋಪದ ಮೇಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳಾದ ಬಾಬು ಚಾಂದ್ ಶೇಖ್, ಸಂತೋಷ ಯಾಳಗಿ, ಆಕಾಶ್ ಬ್ಲೂಟುತ್ ಡಿವೈಸ್ ಬಳಸಿ ನಕಲು ಮಾಡುತ್ತಿದ್ದರು ಎನ್ನಲಾಗಿದೆ. ಪರೀಕ್ಷಾ ಮೇಲ್ವಿಚಾರಕರು ಈ ಅಭ್ಯರ್ಥಿಗಳ ಅಕ್ರಮವನ್ನು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಗುರಿಪಡಿಸಿರುವ ಪೊಲೀಸರು ಮಹತ್ವದ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ. ಈ ಅಕ್ರಮಗಳಿಗೆ PSI ನೇಮಕಾತಿ ಅಕ್ರಮದ ಆರೋಪಿ ಆರ್.ಡಿ.ಪಾಟೀಲ್ ಶಾಮೀಲು ಇರುವ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.