‘ಶಕ್ತಿ’ V/s ಜೇಬುಕಳ್ಳತನ’; ಬಿಜೆಪಿಗೆ ಧನ್ಯವಾದ ಎಂದ ಕಾಂಗ್ರೆಸ್

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಇದೀಗ ;ಶಕ್ತಿ’ ಜಟಾಪಟಿ ಜೋರಾಗಿ ಸಾಗಿದೆ. ರಾಜ್ಯ ಸಾರಿಗೆ ಸಂಸ್ಥೆ (KSRTC) ಸಾಮಾನ್ಯ ಬಸ್‌ಗಳ ದರವನ್ನೂ ನಾಲ್ಕೇ ತಿಂಗಳಲ್ಲಿ ಶೇ.20ರಷ್ಟು ಏರಿಕೆ ಮಾಡಿರುವ ತೀರ್ಮಾನ ಬಗ್ಗೆ ಪ್ರತಿಪಕ್ಷ ಬಿಜೆಪಿ ವ್ಯಂಗ್ಯವಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಜೇಬುಗಳ್ಳರಿದ್ದಾರೆ, ಎಚ್ಚರಿಕೆ’ ಎಂದು ಬಸ್ಸುಗಳಲ್ಲಿ ಬರೆದಿರುವುದನ್ನು ‘ಕಾಂಗ್ರೆಸ್‌ ಸರ್ಕಾರ ಜೇಬುಗಳ್ಳತನಕ್ಕೆ ಇಳಿದಿದೆ, ಎಚ್ಚರಿಕೆ’ ಎಂದು ಬದಲಿಸಬೇಕು’ ಎಂದು ವ್ಯಂಗ್ಯವಾಡಿದೆ. ಸಾಮಾನ್ಯ ಬಸ್‌ಗಳ ದರವನ್ನೂ ನಾಲ್ಕೇ ತಿಂಗಳಲ್ಲಿ ಶೇ.20ರಷ್ಟು ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಹಗಲು ದರೋಡೆ ಎಂದು ಬಣ್ಣಿಸಿರುವ ಬಿಜೆಪಿ, ಮೊದಲು ₹160 ರಲ್ಲಿ ಮುಗಿಯುತ್ತಿದ್ದ ಪ್ರಯಾಣಕ್ಕೆ ಈಗ ₹200ಕ್ಕೆ ಕೈ ಸುಟ್ಟುಕೊಳ್ಳಬೇಕು ಎಂದಿದೆ. ಅಷ್ಟೇ ಅಲ್ಲ, ಇನ್ನು ಒಂದೇ ತಿಂಗಳಲ್ಲಿ ಸ್ಥಗಿತಗೊಳ್ಳಲಿರುವ ಶಕ್ತಿ ಯೋಜನೆಯ ಎಲ್ಲಾ ಹೊರೆಯನ್ನೂ ಕರ್ನಾಟಕದ ಜನ ಹೊರಬೇಕಿರುವುದು ನಿಶ್ಚಿತ ಎಂದು ಹೇಳಿದೆ.

ಇದಕ್ಕೆ ಟ್ವಿಟ್ಟರ್’ನಲ್ಲೆ ಎದಿರೇಟು ನೀಡಿರುವ ಕಾಂಗ್ರೆಸ್ ಪಕ್ಷ, ‘ಶಕ್ತಿ ಯೋಜನೆಗೆ ನಿಜವಾಗಲೂ ಶಕ್ತಿ ತುಂಬುತ್ತಿರುವ ಬಿಜೆಪಿಯವರಿಗೆ ಧನ್ಯವಾದಗಳು’ ಎಂದಿದೆ. ‘ಶಕ್ತಿ ಯೋಜನೆಯ ಯಶಸ್ಸು ಬಿಜೆಪಿಯವರ ನಿದ್ದೆಗೆಡಿಸಿರುವುದರಲ್ಲಿ ಎರಡು ಮಾತಿಲ್ಲ. ಶಕ್ತಿ ಯೋಜನೆಗೆ ನಿಜವಾಗಲೂ ಶಕ್ತಿ ತುಂಬುತ್ತಿರುವ ಬಿಜೆಪಿಯವರಿಗೆ ಧನ್ಯವಾದಗಳು. ಶಕ್ತಿ ಯೋಜನೆ ಇನ್ನೊಂದು ತಿಂಗಳಿಗೆ ನಿಲ್ಲಲಿದೆ ಎಂದು‌ ಬಡಬಡಾಯಿಸುತ್ತಿರುವ ಬಿಜೆಪಿಯವರೇ.. ಶಕ್ತಿ ಯೋಜನೆ ಅನುಷ್ಠಾನವೇ ಆಗುವುದಿಲ್ಲ, ಸಾರಿಗೆ ಸಂಸ್ಥೆಗಳು ದಿವಾಳಿಯಾಗಲಿವೆ ಎಂದು ಬೊಬ್ಬೆ ಇಡುತ್ತಿದ್ದವರು ಇಂದು ಈಗಾಗಲೇ ರೂ.2000 ಕೋಟಿ ವೆಚ್ಚವಾಗಿದೆ, ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಖಾಲಿಯಾಗುತ್ತಿದೆ ಎನ್ನುತ್ತಿದ್ದಾರೆ. ಬಜೆಟ್ ನಲ್ಲಿ ಮೀಸಲಿಟ್ಟಿರುವ ಹಣವನ್ನು ಹೆಚ್ಚಿಸಿ ಸಾರಿಗೆ ಸಂಸ್ಥೆಗಳಿಗೆ‌ ಹಣ ನೀಡುವ ಜವಾಬ್ದಾರಿ ನಮ್ಮದಿದೆ’ ಎಂದು ಕಾಂಗ್ರೆಸ್ ಹೇಳಿದೆ.

‘ಕಳೆದ 5 ವರುಷಗಳ ಬಿಜೆಪಿ ಆಡಳಿತದಲ್ಲಿ ಒಂದೇ‌ ಒಂದು ನೇಮಕಾತಿ ಮಾಡದೆ, ಬಸ್ಸುಗಳನ್ನು ಖರೀದಿಸದೆ , ಸಾರ್ವಜನಿಕರು ಡಕೋಟ ಬಸ್ಸಿನಲ್ಲಿ ಓಡಾಡುವಂತೆ ಮಾಡಿ, ಸಾರಿಗೆ ಸಂಸ್ಥೆಗಳಲ್ಲಿ 31.03.2023 ಕ್ಕೆ ರೂ.3735 ಕೋಟಿ ಬಾಕಿ‌ ಹೊಣೆಗಾರಿಕೆ ಇಟ್ಟಿರುವ ಕೀರ್ತಿ ಬಿಜೆಪಿಯವರಿಗೆ ಸಲ್ಲಬೇಕು. ಈಗಾಗಲೇ ನಾವು 5675 ಬಸ್ಸುಗಳ ಖರೀದಿಯ ಪ್ರಕ್ರಿಯೆ ಹಾಗೂ 8719 ಸಿಬ್ಬಂದಿಗಳ ನೇಮಕಾತಿಗೆ ಅನುಮತಿ‌ ನೀಡಿದ್ದೇವೆ. ನಮ್ಮ ಕೆಲಸವೇ‌ ನಮ್ಮ ಶಕ್ತಿ ಎಂದು ನಿರೂಪಿಸಿದ್ದೇವೆ. ಶಕ್ತಿ‌ ಯೋಜನೆಯು ಮುಂದಿನ 10 ವರುಷಗಳವರೆಗೆ ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಯ ನಮ್ಮ ಪ್ರಯಾಣ ಗುರಿ‌ ಮುಟ್ಟಲಿದೆ’ ಎಂದು ಕಾಂಗ್ರೆಸ್ ಹೇಳಿದೆ.

Related posts