ಬೆಂಗಳೂರು: ರಾಜ್ಯದಲ್ಲಿ ಬರ ಅಧ್ಯಯನಕ್ಕಾಗಿ ಪ್ರವಾಸ ಹೋಗುವ ಬದಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವುದೇ ಸೂಕ್ತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ
ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ರಾಜ್ಯವನ್ನು ತೀವ್ರ ಬರಪರಿಸ್ಥಿತಿ ಆವರಿಸಿರುವ ಹಿನ್ನೆಲೆಯಲ್ಲಿ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರದಿಂದಾಗಿ ಒಟ್ಟು ರೂ.33,710 ಕೋಟಿ ಬೆಳೆಹಾನಿಯಾಗಿದ್ದು, ಕೇಂದ್ರದಿಂದ ರೂ.17,901 ಕೋಟಿ ಪರಿಹಾರಕ್ಕೆ ಮನವಿ ನೀಡಲಾಗಿದೆ’ ಎಂದಿದ್ದಾರೆ.
ರಾಜ್ಯಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಆಗಮಿಸಿದ್ದ ಸಂದರ್ಭದಲ್ಲಿ ಹಸಿರು ಬರವೂ ಸೇರಿದಂತೆ ಬರ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ನಮ್ಮ ಸರ್ಕಾರದ ಸಚಿವರುಗಳಾದ ಎನ್.ಚಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ಮತ್ತು ಕೃಷ್ಣ ಬೈರೇಗೌಡ ಅವರು ಕೇಂದ್ರದ ಕೃಷಿ ಕಾರ್ಯದರ್ಶಿಯವರನ್ನು ಪ್ರತ್ಯೇಕವಾಗಿ ಭೇಟಿಮಾಡಿ ರಾಜ್ಯದ ಬರಪರಿಸ್ಥಿತಿಯ ಮಾಹಿತಿಯನ್ನು ನೀಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯಾಗಲೇ, ಅನುದಾನವಾಗಲೀ ಯಾವುದು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎನ್.ಡಿ.ಆರ್.ಎಫ್ ನಿಯಮಾನುಸಾರ ಬರ ಪರಿಹಾರ ಬಿಡುಗಡೆ ಮಾಡಬೇಕಿದ್ದ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದ್ದು, ಈ ಸಂಬಂಧ ತಾವೇ ಸರ್ವಪಕ್ಷ ನಿಯೋಗ ಕೊಂಡೊಯ್ಯುವುದಾದರೆ ನಾನು ನಿಮ್ಮ ಜೊತೆ ಬರುವುದಾಗಿ ಹೇಳಿದ್ದೆ. ಈಗಲೂ ಕಾಲ ಮಿಂಚಿಲ್ಲ ತಾವು ರಾಜ್ಯದಲ್ಲಿ ಬರ ಅಧ್ಯಯನಕ್ಕಾಗಿ ಪ್ರವಾಸ ಹೋಗುವ ಬದಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವುದೇ ಸೂಕ್ತ ಮತ್ತು ಈ ಹೊತ್ತಿನ ಅಗತ್ಯ ನಿರ್ಧಾರವಾಗಿದೆ ಎಂಬುದನ್ನು ಮತ್ತೊಮ್ಮೆ ತಿಳಿಸಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.