ಬೆಂಗಳೂರು: ಮುಂಬರುವ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಅವಧಿ ವಿಸ್ತರಿಸಲು ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ.
ಈ ಚುನಾವಣೆಗೆ ಸಂಬಂಧಿಸಿ ಮತದಾರರ ನೋಂದಣಿ ಅವಧಿಯನ್ನು ಸೆಪ್ಟೆಂಬರ್ 30ರಿಂದ ನವೆಂಬರ್ 6ರವರೆಗೆ ನಿಗದಿಪಡಿಸಲಾಗಿತ್ತು. ಅದನ್ನು ಮತ್ತೊಂದು ತಿಂಗಳು ಅಂದರೆ ಡಿಸೆಂಬರ್ 6ರವರೆಗೆ ವಿಸ್ತರಿಸಬೇಕೆಂದು ಬಿಜೆಪಿ ಬೆಂಗಳೂರು ಘಟಕದ ವತಿಯಿಂದ ವಿನಂತಿಸಲಾಗಿದೆ. ಈ ಸಂಬಂಧ ಬಿಜೆಪಿ ನಾಯಕರು ಇಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಡಾ|| ಸಿ.ಎನ್. ಅಶ್ವತ್ಥ್ಥನಾರಾಯಣ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರ ನಿಯೋಗವು ಈ ಮನವಿ ಸಲ್ಲಿಸಿತು.
ಬೆಂಗಳೂರು ನಗರವೊಂದರಲ್ಲೇ 50 ಲಕ್ಷ ಮತದಾರರಿದ್ದಾರೆ. ಅವರ ಮತದಾನದ ಹಕ್ಕನ್ನು ದೊರಕಿಸಲು ಅವರೆಲ್ಲರನ್ನು ಈ ಪ್ರಕ್ರಿಯೆಯಲ್ಲಿ ನೋಂದಣಿ ಮಾಡಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ಪೂರಕವಾಗಿದೆ. ನಿಗದಿತ ಅವಧಿಯಲ್ಲಿ ಗಣೇಶ ಚತುರ್ಥಿ ಮತ್ತು ದಸರಾ ಹಬ್ಬದ ಕಾರಣಕ್ಕೆ ಸಾಲು ಸಾಲು ರಜೆಗಳಿದ್ದವು. ಶಾಲಾ ಕಾಲೇಜುಗಳಿಗೆ ದಸರಾ ರಜೆ ಕೊಡಲಾಗಿತ್ತು. ಈ ಸಂದರ್ಭದಲ್ಲಿ ಅನೇಕರು ಪರಸ್ಥಳಗಳಿಗೆ ಮತ್ತು ನೋಂದಣಿ ಮಾಡಿಸಬೇಕಾದ ಕಾರ್ಯಕರ್ತರು ಹಬ್ಬದ ಸಲುವಾಗಿ ತೊಡಗಿಸಿಕೊಂಡಿದ್ದರು. ಇದರಿಂದ ನೋಂದಣಿ ಪ್ರಕ್ರಿಯೆಗೆ ತೊಡಕಾಗಿದೆ ಎಂದು ಗಮನ ಸೆಳೆಯಲಾಗಿದೆ.
ಇದೀಗ ಗಡುವು ಮುಗಿಯುತ್ತಿದ್ದು, ಅನೇಕರು ಇನ್ನೂ ಪಟ್ಟಿಯಿಂದ ಹೊರಗಿದ್ದಾರೆ. ಇದರಿಂದ ವಿದ್ಯಾವಂತ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಮತದಾನ ಮಾಡುವುದು ಅತ್ಯಂತ ಮಹತ್ವದ ಜವಾಬ್ದಾರಿಯಾಗಿದೆ. ಈ ಕಾರಣಕ್ಕಾಗಿ ನಿಗದಿತ ದಿನಾಂಕವನ್ನು ಮತ್ತೊಂದು ತಿಂಗಳು ವಿಸ್ತರಿಸಲು ನಿಯೋಗ ಮನವಿ ಮಾಡಿದೆ.