ಚಾಮರಾಜನಗರ: ರಕ್ಷಿತಾರಣ್ಯದಲ್ಲಿ ವನ್ಯಜೀವಿ ಬೇಟೆಯಾಡುತ್ತಿದ್ದವರ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ಘಟನೆ ನಡೆದಿದ್ದು ಕಾರ್ಯಾಚರಣೆಯಲ್ಲಿ ವ್ಯಕ್ತಿಯೊಬ್ನ ಬಲಿಯಾಗಿದ್ದಾನೆ.
ಭಾನುವಾರ (ನವೆಂಬರ್ 5) ಬೆಳ್ಳಂಬೆಳಗ್ಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಬ್ಬ ಕಳ್ಳ ಬೇಟೆಗಾರನನ್ನು ಅರಣ್ಯ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ. ಸುಮಾರು ಎಂಟು ಮಂದಿಯಿದ್ದ ಬೇಟೆಗಾರರ ಗುಂಪು ಸಾಂಬಾರ್ ಜಿಂಕೆಯನ್ನು ಕೊಂದು ಹಾಕಿತ್ತು. ಈ ವೇಳೆ ಮಾರ್ಧನಿಸಿದ ಗುಂಡಿನ ಸದ್ದು ಕೇಳಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು.
ಅರಣ್ಯ ಸಿಬ್ಬಂದಿಯು ಬೇಟೆಗಾರರನ್ನು ಪತ್ತೆಮಾಡಿದ ಸಂದರ್ಭದಲ್ಲಿ ಕಿಡಿಗೇಡಿಗಳು ಪರಾರಿಯಾಗಲೆತ್ನಿಸಿದ್ದಾರೆ. ಅರಣ್ಯ ಸಿಬ್ಬಂದಿ ಹಿಂಬಾಲಿಸಿದಾಗ ಬೇಟೆಗಾರರು ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರೆ. ಆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಬೇಟೆಗಾರ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಹಾಗೂ ಜಿಲ್ಲಾ ಅಧಿಕಾರಿಗಳು ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.