ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಕರುನಾಡಿನ ಕೋಟ್ಯಂತರ ಸ್ತ್ರೀಯಯರ ಪಾಲಿಗೆ ಆರಾಮದಾಯ ಅನ್ನಿಸಿರುವ ಈ ‘ಶಕ್ತಿ’ ಯೋಜನೆ ರಾಜ್ಯ ಸರ್ಕಾರಿ ಸ್ವಾಮ್ಯದ ‘ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC)’ ಪಾಲಿಗೂ ಬಹಳಷ್ಟು ಆದಾಯದಾಯಕ ಎನಿಸಿದೆ. ಸರ್ಕಾರದ ಎಲ್ಲಾ ಗ್ಯಾರೆಂಟಿಗಳಲ್ಲಿಯೇ ಅತೀ ಹೆಚ್ಚು ಯಶಸ್ವಿಯಾಗಿರುವುದೂ ‘ಶಕ್ತಿ’ ಯೋಜನೆ.
ರಾಜ್ಯ ಸರ್ಕಾರದ ಈ ಯೋಜನೆಯು ಮುನ್ನುಡಿ ಬರೆದ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದೂ ಇದೆ. ಆದರೆ ಇದೀಗ ಈ ‘ಶಕ್ತಿ’ ಯೋಜನೆಯು KSRTC ನಿರ್ವಾಹಕರ ಪಾಲಿಗೆ ಪ್ರಯಾಸದ ಕೆಲಸವಾಗಿ ಪರಿಣಮಿಸಿದೆ.
‘ಶಕ್ತಿ’ ಯೋಜನೆ ಜಾರಿಯಾದ ನಂತರ ರಾಜ್ಯದ ಸಾರಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಸುಲಭ ದಾರಿಯನ್ನು ಕರುಣಿಸಿದೆ. ಸಾಮಾನ್ಯ ಹಾಗೂ ಎಕ್ಸ್ಪ್ರೆಸ್ ಬಸ್ಸುಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಹಾಗಾಗಿ ನಿತ್ಯವೂ KSRTC ಬಸ್ಸುಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದೆ. ಆದರೆ ಈ ಉಚಿತದ ಯೋಜನೆಯು ನಿರ್ವಾಹಕರ ಪಾಲಿಗೆ ನಿಭಾಯಿಸಲಾಗದ ಪರಿಸ್ಥಿತಿಯನ್ನು ತಂದೊಡ್ಡಿದೆಯಂತೆ.
ಉಚಿತ ಪ್ರಯಾಣದ ಅವಕಾಶವನ್ನು ಕೆಲವು ಮಹಿಳೆಯರು ಬಳಕೆ ಮಾಡುವ ಪರಿ ವಾಗ್ವಾದದ ಸನ್ನಿವೇಶಗಳನ್ನು ಸೃಷ್ಟಿಸುತ್ತಿವೆ. ಹಲವಾರು ಮಂದಿ ನಿರ್ದಿಷ್ಟ ಗುರುತಿನ ಚೀಟಿ ಹೊಂದದೆ ಸಮಸ್ಯೆ ಸೃಷ್ಟಿಸಿದರೆ. ಇನ್ನೂ ಕೆಲವರು ಒಂದು ನಗರದಿಂದ ದೂರದ ಮತ್ತೊಂದು ಊರಿಗೆ ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದು ಅವಾಂತರ ಸೃಷ್ಟಿಸುತ್ತಿದ್ದಾರೆ.
ಈ ರೀತಿಯ ನಡೆ ‘ಅವ್ಯವಹಾರ’ ಎಂಬ ಆರೋಪಕ್ಕೆ ಕಾರಣವಾಗುತ್ತಿದೆ. ನಿರ್ವಾಹಕರು ತಮ್ಮ ನಿಗಮಕ್ಕೆ ಆದಾಯ ತಂದುಕೊಟ್ಟು ಶಹಬ್ಬಾಸ್ ಗಿರಿ ಗಿಟ್ಟಿಕೊಳ್ಳುವ ಉದ್ದೇಶದಿಂದ ಕೊನೆಯ ಸ್ಟಾಪ್’ವರೆಗಿನ ಟಿಕೆಟ್ ಕೊಟ್ಟು ಸರ್ಕಾರದ ಬೊಕ್ಕಸಕ್ಕೆ ಹೊರೆ ನೀಡುತ್ತಿದ್ದಾರೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಪ್ರತಿಧ್ವನಿಸಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ KSRTC ತನ್ನ ನಿಯಮವನ್ನು ಬಿಗಿಗೊಳಿಸಿದೆ. ಟಿಕೆಟ್ ಪಡೆದ ಪ್ರಯಾಣಿಕರು ನಿರ್ದಿಷ್ಟ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲವಾದರೆ ನಿರ್ವಾಹಕರೇ ಹೊಣೆಗಾರರಾಗುತ್ತಾರೆ. ಈ ನಿಯಮದ ಹೊಡೆತದಿಂದ ಪಾರಾಗಲು ನಿರ್ವಾಹಕರು ಪರದಾಡುವಂತಾಗಿದೆ.
ನಿಯಮ ಬಗ್ಗೆ ವಿವಾದ ಇಲ್ಲ,
ಅನಗತ್ಯ ವಾಗ್ವಾದ..!
ಕೆಲವು ದಿನಗಳ ಹಿಂದೆ ಹಾಸನಕ್ಕೆ ಟಿಕೆಟ್ ಪಡೆದ ‘ಶಕ್ತಿ’ ಫಲಾನುಭವಿ ಮಹಿಳೆ ಮಾರ್ಗ ಮಧ್ಯೆ ಬೇರೆಯೇ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯಲು ಯತ್ನಿಸಿದಾಗ ನಿರ್ವಾಹಕರು ತಡೆದಿದ್ದಾರೆ. ಆ ವೇಳೆ ನಿರ್ವಾಹಕ ಮತ್ತು ಮಹಿಳೆ ನಡುವೆ ವಾಗ್ವಾದ ನಡೆದಿದೆ.
ಪರಿಸ್ಥಿತಿಯಿಂದ ಬೇಸತ್ತ ನಿರ್ವಾಹಕರು ಮೇಲಧಿಕಾರಿ ಬಳಿ ಅಲವತ್ತುಕೊಂಡ ವೈಖರಿಯು KSRTC ನಿರ್ವಾಹಕರ ಪರಿಸ್ಥಿತಿ ಹೇಗಿದೆ ಎಂಬುದನ್ನು ಅನಾವರಣ ಮಾಡಿದಂತಿದೆ. “ಶಕ್ತಿ ಯೋಜನೆಯಲ್ಲಿ ನಿಜಕ್ಕೂ ನಿರ್ವಾಹಕ ಹುದ್ದೆ ನಿರ್ವಹಿಸುವದು ಕಷ್ಟಕರವಾಗಿದೆ. ಸ್ತ್ರೀಯರು ಟಿಕೆಟ್ ತಗೊಳ್ಳೊದು ಒಂದೂರಿಗೆ? ಇಳಿಯೊದು ಇನ್ನೊಂದೂರಿನಲ್ಲಿ. ಪ್ರತಿಯೊಬ್ಬ ಸ್ತ್ರೀಯರು ಟಿಕೆಟ್ ತಗೊಂಡ ಪ್ರಕಾರ ಇಳಿತಾರೆ ಅಥವಾ ಇಲ್ಲವೇ ಅಂತ ನಿರ್ವಾಹಕರು ಪ್ರತಿ ಹಂತದಲ್ಲಿ ನೋಡಕಾಗುತ್ತಾ ಸರ್? ಒಂದು ವೇಳೆ ಮಾರ್ಗ ಮದ್ಯದಲ್ಲಿ ಇಳಿಯುವದು ಗೊತ್ತಾಗಿ ಇಳಿಯಬೇಡಿ ಅಂತ ಹೇಳಿದರೂ ಆ ಸ್ತ್ರೀಯರೊಡನೆ ನಿರ್ವಾಹಕರು ಜಗಳ ಮಾಡಬೇಕೆ ಸರ್” ಎಂದು ಆ ನಿರ್ವಾಹಕರು ತಮ್ಮ ಮೇಲಧಿಕಾರಿಗೆ ರವಾನಿಸಿದ ಸಂದೇಶದಲ್ಲಿ ಮಾರ್ಮಿಕವಾಗಿ ಪ್ರಶ್ನೆ ಮಾಡಿದ್ದಾರೆ.
ಈ ರೀತಿಯ ಗೋಳಾಟ ಒಂದೆರಡು ದಿನವಲ್ಲ. ನಿತ್ಯವೂ ನಿರ್ವಾಹಕರಿಗೆ ಪರದಾಟದ ಪ್ರಸಂಗ ಎದುರಾಗುತ್ತಿದೆ. ಅತ್ತ ಸರ್ಕಾರದ ಯೋಜನೆಯನ್ನು ಪರಿಪೂರ್ಣ ಅನುಷ್ಠಾನ ಗೊಳಿಸಬೇಕಾದ ಕರ್ತವ್ಯ, ಇನ್ನೊಂದೆಡೆ. ಟಿಕೆಟ್ ವಿಚಾರದಲ್ಲಿ ನಿಗಮದ ನಿಯಮವನ್ನು ಪರಿಪಾಲಿಸಲೇಬೇಕಾದ ಅನಿವಾರ್ಯತೆ. ಇವೆರಡರ ನಡುವೆ ನಿರ್ವಾಹಕರು ಹೈರಾಣಾಗಿದ್ದಾರೆ ಎಂಬುದು ಸ್ಪಷ್ಟ ಸತ್ಯ. ಈ ಪರಿಸ್ಥಿತಿ ಹಿನ್ನೆಲೆ ಅಧಿಕಾರಿಗಳು ಪ್ರಮುಖ ನಿಲ್ದಾಣಗಳಿಗೆ ತೆರಳಿ ಪರಿಸ್ಥಿತಿ ಮನವರಿಕೆಯ ಪ್ರಯತ್ನ ಮಾಡುತ್ತಿದ್ದಾರೆ. ಕೆಎಸ್ಸಾರ್ಟಿಸಿ ಸಿಬ್ಬಂದಿಯು ಸಂಯಮದಿಂದ ‘ಶಕ್ತಿ’ ಯೋಜನೆಯನ್ನು ಯಶಸ್ವಿಗೊಳಿಸುತ್ತಿದ್ದಾರೆ. ಪ್ರಯಾಣಿಕರು ಕೂಡ ಚಾಲಕ-ನಿರ್ವಾಹಕರಿಗೆ ಸಹಕರಿಸಬೇಕು’ ಎಂದು ಮನವಿ ಮಾಡುತ್ತಿರುವ ಸನ್ನಿವೇಶಗಳೂ ಕಂಡುಬರುತ್ತಿವೆ.