ಬೆಂಗಳೂರು: ‘ನೆಹರೂ ಅವರ ಪ್ರತಿಯೊಂದು ನಿಲುವು ನೀತಿಗಳು ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿತ್ತು” ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜವಾಹರಲಾಲ್ ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಾಮಾಜಿಕ, ಆರ್ಥಿಕ ಶಕ್ತಿಗೆ ಅಡಿಪಾಯ ಹಾಕಿದವರು. ಬೆಂಗಳೂರಿನಲ್ಲಿನ ಮಾನವ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೆಹರೂ ಅವರು ಆ ಕಾಲದಲ್ಲೇ ಎಚ್ಎಎಲ್, ಹೆಚ್ಎಂಟಿ, ಬಿಇಎಲ್, ಬಿಎಚ್ಇಎಲ್, ಇಸ್ರೋ ಸೇರಿದಂತೆ ಅನೇಕ ಸಂಸ್ಥೆಗಳನ್ನು ಇಲ್ಲಿ ಸ್ಥಾಪಿಸಿದರು ಎಂದರು.
ಈ ಸಂಸ್ಥೆಗಳಿಂದ ನಮ್ಮ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯಕ್ಕೆ ಶಕ್ತಿ ಬಂದಿದೆ. ಅವರ ಕಾಲದಲ್ಲಿನ ಪಂಚವಾರ್ಷಿಕ ಯೋಜನೆ, ಅಂಬೇಡ್ಕರ್ ಅವರಿಗೆ ಕೊಟ್ಟ ಜವಾಬ್ದಾರಿ ಮಹತ್ವದ್ದಾಗಿದೆ. ಅವರ ಪ್ರತಿಯೊಂದು ನಿಲುವು ನೀತಿಗಳು ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿತ್ತು. ಅವರ ವಿದೇಶಾಂಗ ನೀತಿಯನ್ನು ವಿಶ್ವದ ಅನೇಕ ರಾಷ್ಟ್ರಗಳು ಅನುಸರಿಸಿದವು ಎಂದವರು ಹೇಳಿದರು.
ಮಾಜಿ ಪ್ರಧಾನಿ 'ಭಾರತ ರತ್ನ' ಪಂಡಿತ್ ಜವಹರಲಾಲ್ ನೆಹರೂ ಅವರ ಜನ್ಮದಿನಾಚರಣೆ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ @DKShivakumar ಅವರು ಕೆಪಿಸಿಸಿ ಕಚೇರಿಯಲ್ಲಿ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು. ಸಿಎಂ @siddaramaiah, ಕೆಪಿಸಿಸಿ ಕಾರ್ಯಾಧ್ಯಕ್ಷರಾದ @SaleemAhmadINC, @chandrappabn,… pic.twitter.com/51X7CUpbc2
— Karnataka Congress (@INCKarnataka) November 14, 2023
ಪಕ್ಷದ ಅಧ್ಯಕ್ಷನಾಗಿ ನಾನು ಕಾರ್ಯಕರ್ತರಿಗೆ ಒಂದು ವಿಚಾರ ಹೇಳುತ್ತೇನೆ. ಅವರ ಚಿಂತನೆ, ಆಚಾರ, ವಿಚಾರ ಅರಿತರೆ ನಾವು ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದು ಅರಿವಾಗುತ್ತದೆ. ಇಂದಿರಾ ಗಾಂಧಿ ಅವರು ಅಂಗನವಾಡಿ ಕಾರ್ಯಕ್ರಮ ಆರಂಭಿಸಿದ ಹಿಂದಿನ ದಿನ ಮಕ್ಕಳ ದಿನಚರಣೆಯಾಗಿತ್ತು. ಗ್ರಾಮೀಣ ಮಕ್ಕಳು ಪೌಷ್ಠಿಕ ಆಹಾರ ಸಿಗಲಿ ಎಂದು ದೇಶದಲ್ಲಿ ಅಂಗನವಾಡಿ ಕಾರ್ಯಕ್ರಮ ಆರಂಭಿಸಿದರು. ಅಂದಿನಿಂದ ಈ ಕಾರ್ಯಕ್ರಮ ದೊಡ್ಡದಾಗಿ ಬೆಳೆಯಿತು. ಅಂಗನವಾಡಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಡಿಕೆಶಿ ನುಡಿದರು.
ಮಕ್ಕಳ ವಿಚಾರದಲ್ಲಿ ನೆಹರೂ ಅವರ ದೂರದೃಷ್ಟಿ ಬಹಳ ದೊಡ್ಡದಾಗಿತ್ತು. ಮಕ್ಕಳನ್ನು ಸರಿಯಾಗಿ ಬೆಳೆಸಿದರೆ ಅವರೇ ದೇಶದ ಭವಿಷ್ಯದ ಆಸ್ತಿ ಎಂಬುದು ನೆಹರೂ ಅವರ ಚಿಂತನೆಯಾಗಿತ್ತು. ಇಂತಹ ಚಿಂತನೆ ನೆಹರೂ ಅವರಿಗೆ ಮಾತ್ರ ಸಾಧ್ಯ. ಅಲಹಬಾದ್ ನಲ್ಲಿ ನೆಹರೂ ಅವರು ತಮ್ಮ ಆಸ್ತಿಯನ್ನು ದೇಶಕ್ಕೆ ದಾನ ಮಾಡಿದರು. ದೆಹಲಿಯಲ್ಲಿ ನೆಹರೂ ಅವರಿದ್ದ ಮನೆಯನ್ನು ಪ್ರಧಾನಮಂತ್ರಿ ವಸ್ತುಸಂಗ್ರಹಾಲಯ ಮಾಡಿ ಅವರ ಹೆಸರು ಇರದಂತೆ ಮಾಡಿದ್ದಾರೆ. ನೆಹರೂ ಹಾಗೂ ಗಾಂಧಿ ಕುಟುಂಬದ ಹೆಸರನ್ನು ನಿರ್ಮೂಲನೆ ಮಾಡಲು ಅನೇಕ ಪ್ರಯತ್ನ ನಡೆಯುತ್ತಿವೆ. ಈ ದೇಶದ ಇತಿಹಾಸದಲ್ಲಿ ಗಾಂಧಿ ಕುಟುಂಬದ ಹೆಸರನ್ನು ನಿರ್ಮೂಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಕ್ಕಳಲ್ಲಿ ಯಾವುದೇ ಜಾತಿ, ಧರ್ಮದ ಬೇಧವಿರುವುದಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಹೋಮ ಹವನ ಮಾಡುವಾಗ ಮಕ್ಕಳಿಂದ ಆಶೀರ್ವಾದ ಪಡೆಯಲು ಹೇಳುತ್ತಾರೆ. ಕಾರಣ ಅವರದ್ದು ಹಾಲಿನಂತಹ ಮನಸ್ಸು. ಬಹಳ ಹಿಂದೆ ಹರಿ ಕೋಡೆ ಅವರ ಮನೆ ಮದುವೆಗೆ ಹೋಗಿದ್ದಾಗ ಅಲ್ಲಿ ತಾಂಬುಲದ ಜೊತೆಗೆ ಅದರಲ್ಲಿ 25 ಚಾಕಲೇಟ್ ಕೊಟ್ಟರು. ನಾನು ಈ ಚಾಕಲೇಟ್ ಯಾಕೆ ಎಂದು ಕೇಳಿದೆ. ಆಗ ಅವರು ಹೇಳಿದರು. ನಾನು ಮದುವೆ ಮಾಡಿದೆ ದೊಡ್ಡವರೆಲ್ಲ ಬಂದು ಊಟ ಮಾಡಿದರು. ಎಷ್ಟು ಜನ ನನಗೆ, ನನ್ನ ಮಕ್ಕಳಿಗೆ ಆಶೀರ್ವಾದ ಮಾಡಿದರೋ ಗೊತ್ತಿಲ್ಲ. ಈ ಚಾಕಲೇಟ್ ಅನ್ನು ಮಕ್ಕಳಿಗೆ ನೀಡುತ್ತಾರೆ. ಅವರ ಆಶೀರ್ವಾದ ನನ್ನ ಮಕ್ಕಳಿಗೆ ಬೇಕು ಎಂದು ಡಿಕೆಶಿ ಹೇಳಿದರು.