ಬೆಂಗಳೂರು: ನಾಡಿನ ಅಧಿದೇವರೆ ಚಾಮುಂಡೇಶ್ವರಿಗೂ ‘ಗೃಹಲಕ್ಷ್ಮೀ’ ಯೋಜನೆಯ 2000 ರೂ ನೀಡಲಾಗುತ್ತೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದ್ದಾರೆ.
ಏನೇ ಕಾರ್ಯಕ್ರಮ ನಡೆಯುವುದಿದ್ದರೂ ಆರಂಭದಲ್ಲಿ ದೇವರಿಗೆ ಹರಕೆ ಸಮರ್ಪಣೆಯು ಅನಾದಿ ಕಾಲದಿಂದಲೂ ಆಸ್ತಿಕರು ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ. ಅದರಂತೆ, ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಯೋಜನೆ ಸುಸೂತ್ರ ಜಾರಿಯ ಸಂಬಂಧ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಹರಿಕೆ ಸಲ್ಲಿಸುವಂತೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆದ ಶಾಸಕ ದಿನೇಶ್ ಗೂಳಿಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದರು.
ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಮುನ್ನ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಎರಡು ಸಾವಿರ ರೂಪಾಯಿಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಜಮೆ ಮಾಡಲು ದಿನೇಶ್ ಗೂಳಿಗೌಡ ಅವರು ಮನವಿ ಸಲ್ಲಿಸಿದ್ದರು.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಶಾಸಕ ದಿನೇಶ್ ಗೂಳಿಗೌಡ, ಉಪ ಮುಖ್ಯಮಂತ್ರಿಗಳು ತನ್ನ ಮನವಿ ಪತ್ರಕ್ಕೆ ತಕ್ಷಣ ಸ್ಪಂದಿಸಿ ಲಕ್ಷ್ಮಿ ಹೆಬ್ಬಾಳ್ಕರ ರವರಿಗೆ ನಿರ್ದೇಶನ ನೀಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಥವಾ ವಯಕ್ತಿಕವಾಗಿ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನು ದೇವಿಯ ಹೆಸರಿಗೆ ಜಮೆ ಮಾಡಲು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.