ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಅಖಾಡ ಸಜ್ಜಾಗಿದ್ದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ಕೈಬಿಟ್ಟುಹೋಗಿರುವ ನೈಜ ಶಿಕ್ಷಕರ ಮತದಾರರ ಹೆಸರುಗಳನ್ನು ಪರಿಷ್ಕೃತ ಕರಡುಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆದ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ ಒತ್ತಾಯಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರ ನೋಂದಣಾಧಿಕಾರಿಗಳೂ ಆದ ಪ್ರಾದೇಶಿಕ ಆಯುಕ್ತರಿಗೆ ಈ ಸಂಬಂಧ ಮನವಿ ಸಲ್ಲಿಸಿರುವ ಎ.ಪಿ.ರಂಗನಾಥ್, ಈಗಾಗಲೇ ಬಿಡುಗಡೆ ಮಾಡಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಕರಡು ಪಟ್ಟಿಯಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಪ್ರೌಢಶಾಲೆಯ 9 BEO (8000) ಮತ್ತು ಬೆಂಗಳೂರು ದಕ್ಷಿಣ ಮತ್ತು ಉತ್ತರದ ಪಿಯು ಉಪನಿರ್ದೇಶಕರು (4000) ಪರಿಶೀಲಿಸಿ ಕಳುಹಿಸಿದ್ದ ಅರ್ಜಿಗಳ ಜೊತೆಗೆ ಉನ್ನತ ಶಿಕ್ಷಣ ಇಲಾಖೆಯ ವಿವಿಧ ಪ್ರಾಂಶುಪಾಲರುಗಳು ಸಲ್ಲಿಸಲಾಗಿದ್ದ (3000) ಒಟ್ಟು 15000 ಅರ್ಜಿಗಳು (ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ) ಜಿಲ್ಲೆಯನ್ನು ಹೊರತುಪಡಿಸಿ ನವೆಂಬರ್ 6 ರ ಸಂಜೆಯ ಒಳಗೆ ಮತದಾರರ ನೋಂದಣಿಗಾಗಿ ನಗರ ಜಿಲ್ಲೆಯ ಮತ್ತು BBMP ವ್ಯಪ್ತಿಯ ವಿವಿಧ RO/ARO ಗಳ ಕಚೇರಿಗಳಲ್ಲಿ ಸ್ವೀಕೃತಗೊಂಡಿರುತ್ತವೆ. ಅವುಗಳಲ್ಲಿ ಸಮಯದ ಅಭಾವ, ನಿರ್ಲಕ್ಷ ಮೊದಲಾದ ಕಾರಣಾಂತರಗಳಿಂದ ಕೇವಲ ಸುಮಾರು 6300 ಶಿಕ್ಷಕರ ಹೆಸರುಗಳು ಮಾತ್ರ ಕರಡುಪ್ರತಿಯಲ್ಲಿ ಸೇರ್ಪಡೆಗೊಂಡಿರುತ್ತವೆ ಎಂದು ಗಮನಸೆಳೆದಿದ್ದಾರೆ.
ಕರಡು ಪ್ರತಿಯಲ್ಲಿ ಸೇರ್ಪಡೆಗೊಂಡಿರದ ಶಿಕ್ಷಕರು ದೂರು ನೀಡಲು ತಾವು ತಿಳಿಸಿರುವುದು ಸರಿಯಷ್ಟೆ. ಆದರೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಅನುಮೋದಿಸಿ, ಅಧಿಕಾರಿಗಳು ಪರಿಶೀಲಿಸಿ ನೋಂದಣಿಗಾಗಿ ಕಳುಹಿಸಿರುವ ಸಾವಿರಾರು ಅರ್ಜಿಗಳ ಶಿಕ್ಷಕರ ಹೆಸರನ್ನು ದೂರು ಪಡೆದು ಸೇರ್ಪಡೆ ಮಾಡುವ ಬದಲು ತಮ್ಮ ವಿವೇಚನೆ ಬಳಸಿ, ಇಲಾಖೆಯ ಅಧಿಕಾರಿಗಳಿಂದ ಸ್ವೀಕೃತವಾಗಿರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, Mother roll ನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸ್ವಯಂ ಕ್ರಮವಹಿಸುವ ಮೂಲಕ ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆ ನಡೆಸಬೇಕೆಂದು ಎ.ಪಿ.ರಂಗನಾಥ್ ಮನವಿ ಮಾಡಿದ್ದಾರೆ.