ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಇಲ್ಲಿನ ರಾಜ್ಯ ಸರಕಾರದ ರಾಜಕೀಯಪ್ರೇರಿತ ನಿರ್ಧಾರದಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮ ಮತ್ತು ಶಿಕ್ಷಣ ನೀತಿ ಪ್ರತ್ಯೇಕ. ಇದರ ಪರಿಜ್ಞಾನ ಇಲ್ಲಿನ ಸಿಎಂ, ಶಿಕ್ಷಣ ಸಚಿವರಿಗೆ ಇದೆಯೇ ಗೊತ್ತಿಲ್ಲ. ಕಲಿಯುವಿಕೆ ಮತ್ತು ಕಲಿಸುವುದು ಇದು ರಾಷ್ಟ್ರೀಯ ಶಿಕ್ಷಣ ನೀತಿ ಎಂದು ವಿವರಿಸಿದರು.
ಹಳೆಯ ನೀತಿಯಲ್ಲಿ ಇದ್ದ ನ್ಯೂನತೆಗಳನ್ನು ಹೋಗಲಾಡಿಸಿ 34 ವರ್ಷಗಳ ಬಳಿಕ ಹೊಸ ನೀತಿ ತರಲಾಗಿದೆ. ಸಮಾನತೆ, ಗುಣಮಟ್ಟದ ಶಿಕ್ಷಣ ಕೊಡಬೇಕಿದೆ. ಇದಕ್ಕಾಗಿ 3ನೇ ರಾಷ್ಟ್ರೀಯ ಶಿಕ್ಷಣ ನೀತಿ ತರಲಾಗಿದೆ. ತಯಾರಿ, ಅಧ್ಯಯನ, ಚರ್ಚೆ ಇಲ್ಲದೆ ಏಕಾಏಕಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೊನೆಗೊಳಿಸುತ್ತೇವೆ ಎನ್ನುವ, 2024ರಿಂದ ರಾಜ್ಯ ಶಿಕ್ಷಣ ನೀತಿ ತರುವ ಪ್ರಯತ್ನ ಖಂಡನೀಯ ಎಂದು ತಿಳಿಸಿದರು.
ಇದು ಬೇಜವಾಬ್ದಾರಿ ಸರಕಾರ ಎಂದು ಟೀಕಿಸಿದರು. ಎನ್ಇಪಿ ಯಶಸ್ವಿಯಾಗಿ ಅನುಷ್ಠಾನ ಆಗುತ್ತಿದೆ. ನಾಗಪುರ ಶಿಕ್ಷಣ, ಉತ್ತರ ಭಾರತದ ಶಿಕ್ಷಣ ನೀತಿ ಇದಲ್ಲ ಎಂದು ತಿಳಿಸಿದರು. ಇವರ ಸಮಿತಿಯಲ್ಲಿ ಇರುವವರು ಯಾರು? ಅಧ್ಯಕ್ಷರು ಯಾವ ಊರಿನವರು? ಶಿವಮೊಗ್ಗದವರೇ, ಮೈಸೂರಿನವರೇ? ಬೆಂಗಳೂರಿನವರೇ? ರಾಜ್ಯ ಸಮಿತಿಯಲ್ಲಿ ಇಲ್ಲಿನವರು ಎಷ್ಟು ಜನ? ಹೊರ ರಾಜ್ಯದವರು ಎಷ್ಟು ಜನ ಎಂದು ಪ್ರಶ್ನಿಸಿದರು.
ರಾಜ್ಯ ಶಿಕ್ಷಣ ನೀತಿಯ ಕಚೇರಿ ಎಲ್ಲಿದೆ? ಸಲಹೆ ಕೊಡಲು ಇಮೇಲ್ ಇದೆಯೇ? ಗೊತ್ತಿಲ್ಲ; ಎಂದ ಅವರು, ವಿನಾಕಾರಣ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧವಾಗಿ ಹೊರಟಿದ್ದಾರೆ. ಕೇರಳವು ಯುಜಿಸಿ ಹೇಳಿದಂತೆ ನಡೆಯುವುದಾಗಿ ಹೇಳಿದೆ. ಇಲ್ಲಿನದು ಹುಡುಗಾಟಿಕೆಯ ಕ್ರಮ. ಶಿಕ್ಷಣ ರಾಜ್ಯದಡಿ ಬರುತ್ತದೆ ಎನ್ನುತ್ತಾರೆ. ರಾಜಕಾರಣಿಗಳ ಸಂಸ್ಥೆಗಳಲ್ಲಿ ಎಸ್ಇಪಿ ಇರುತ್ತದೆಯೇ? ಗುಣಮಟ್ಟ ಹೆಚ್ಚಳಕ್ಕೆ ಈ ಸರಕಾರದಿಂದ ಏನು ಪ್ರಯತ್ನ ಆಗಿದೆ ಎಂದು ಕೇಳಿದರು.
30 ಸಾವಿರ ಕೋಟಿಯನ್ನು ಪದವಿ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಗುಣಮಟ್ಟ ಹೆಚ್ಚಳ ಆಗಿದೆಯೇ? ಪ್ರಸ್ತುತ ವಿಚಾರಗಳನ್ನು ಮಾತನಾಡಿಲ್ಲ. ಅಜ್ಞಾನಿ, ಅವೈಜ್ಞಾನಿಕವಾಗಿ ಭಾಷಣ ಮಾಡುತ್ತಿದ್ದಾರೆ. ವಿಶ್ವದರ್ಜೆಯ ಶಿಕ್ಷಣ ಕೊಡಲು ಒಂದೇ ಒಂದು ಸರಕಾರಿ ಸಂಸ್ಥೆ ಇದೆಯೇ? 21ನೇ ಶತಮಾನ ಜ್ಞಾನದ ಶತಮಾನ. ಸರಸ್ವತಿ ಎಲ್ಲಿದೆಯೋ ಲಕ್ಷ್ಮಿ ಅಲ್ಲಿರುತ್ತಾಳೆ. ಬಡತನ, ತಾರತಮ್ಯ ಇಲ್ಲದೆ ಉತ್ತಮ ಕನಸು ನನಸಾಗಿಸಲು ಗುಣಮಟ್ಟದ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ ಅನಿವಾರ್ಯ. ಕೌಶಲ್ಯತೆ, ಗುಣಮಟ್ಟದ ಶಿಕ್ಷಣ ಜೊತೆಗೂಡಿ ಇದನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಶಿಕ್ಷಣ ನೀತಿಯನ್ನು ಕೇಂದ್ರದ ಕಾನೂನಿನಡಿ ತರಲಾಗಿದೆ. ಕನ್ಕರೆಂಟ್ ಲಿಸ್ಟ್ನಡಿ ಅದನ್ನು ತರಲಾಗಿದೆ. ಸಮನ್ವಯದಿಂದ ಇದನ್ನು ತರಲಾಗುತ್ತದೆ. ಯುಜಿಸಿ ಮಾನ್ಯತೆ ಇಲ್ಲದೆ ಪದವಿ ಕೊಡಲು ಅಸಾಧ್ಯ. ಕುಲಪತಿ, ಉಪನ್ಯಾಸಕರನ್ನು ಯುಜಿಸಿ ನಿಯಮದಡಿ ನೇಮಿಸಲಾಗುತ್ತದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ ಕಾಂಗ್ರೆಸ್ ಸರಕಾರದ ಧೋರಣೆ 1968ರಲ್ಲಿ ಪ್ರಥಮ ರಾಷ್ಟ್ರೀಯ ಶಿಕ್ಷಣ ನೀತಿ ಘೋಷಿಸಿ ಅನುಷ್ಠಾನಕ್ಕೆ ಬಂದಿತ್ತು. 1986ರಲ್ಲಿ ಎರಡನೇ, 34 ವರ್ಷಗಳ ನಂತರ 2020ರಲ್ಲಿ 3ನೇ ರಾಷ್ಟ್ರೀಯ ಶಿಕ್ಷಣ ನೀತಿ 2021ರಿಂದ ರಾಜ್ಯದಲ್ಲಿ ಅನುಷ್ಠಾನವಾಗಿದೆ ಎಂದು ವಿವರಿಸಿದರು. ಇದೇವೇಳೆ ಸಂತರಾದ ಕನಕದಾಸ ಜಯಂತಿಯ ಶುಭಾಶಯ ಕೋರಿದರು.
ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಮೋದಿಜೀ ಅವರ ಜನಪ್ರಿಯತೆ ಹೆಚ್ಚಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಜೀ ಅವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಬರಲಿದೆ. ಪಂಚರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಬಿಜೆಪಿಗೆ ಸಿಹಿ ಸುದ್ದಿ ಖಚಿತ ಎಂದು ತಿಳಿಸಿದರು. ಈ ಫಲಿತಾಂಶವು ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು. ಮೋದಿಜೀ ಅವರ ಸರಿಸಮನಾದ ನಾಯಕ ಯಾರಾದರೂ ವಿಪಕ್ಷದಲ್ಲಿ ಇದ್ದಾರಾ ಎಂದು ಕೇಳಿದರು.
ಶೌಚಾಲಯ ನಿರ್ಮಾಣ, ಸ್ವಚ್ಛತೆ, ಗ್ಯಾಸ್ ಸಿಲಿಂಡರ್ ಪೂರೈಕೆ. ರಸ್ತೆ ನಿರ್ಮಾಣ, ರಾಮಮಂದಿರ ನಿರ್ಮಾಣ ಮಾಡಿದ ಬಿಜೆಪಿಯದು ಸಮರ್ಥ ಸರಕಾರ. ಬಿಜೆಪಿಯ ಕೇಂದ್ರ ಸರಕಾರದ ವರ್ಚಸ್ಸು ಚೆನ್ನಾಗಿದೆ ಎಂದು ಅವರು ವಿಶ್ಲೇಷಿಸಿದರು.
ವಿಧಾನ ಪರಿಷತ್ತಿನ ಸದಸ್ಯ ಕೆ.ಎಸ್.ನವೀನ್ ಅವರು ಮಾತನಾಡಿ, ಅನ್ನ, ಆರೋಗ್ಯ, ಶಿಕ್ಷಣದಲ್ಲಿ ರಾಜಕೀಯ ತರಬೇಡಿ ಎಂದು ಆಗ್ರಹಿಸಿದರು. ರಾಜ್ಯವನ್ನು ದಶಕಗಳ ಕಾಲ ಹಿಂದಕ್ಕೆ ತಳ್ಳುವ ಪ್ರಯತ್ನ ರಾಜ್ಯದ ಕಾಂಗ್ರೆಸ್ ಸರಕಾರದಿಂದ ನಡೆದಿದೆ ಎಂದು ಟೀಕಿಸಿದರು.
ಕನ್ನಡಿಗರ ಮಕ್ಕಳ ಭವಿಷ್ಯವನ್ನು ಕತ್ತಲಿಗೆ ನೂಕುವ ಕೆಲಸ ನಡೆಯಲಿದೆ. ಸಮಾಲೋಚನೆ ಮಾಡಿ; ಚರ್ಚೆಗಳನ್ನು ಮಾಡಿ. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರ ಕೂಗು ಎನ್ಇಪಿ ಪರವಾಗಿದೆ. ಐಸಿಎಸ್ಇ, ಸಿಬಿಎಸ್ಇ ಶಾಲೆಗಳಲ್ಲಿ ಎನ್ಇಪಿ ಸಿಗುತ್ತದೆ. ಸರಕಾರಿ ಶಾಲೆಗಳ ಮಕ್ಕಳ ಪರಿಸ್ಥಿತಿ ಏನು? ಎಂದು ಕೇಳಿದರು.
ವಿಧಾನ ಪರಿಷತ್ತಿನ ಸದಸ್ಯ ಹನುಮಂತ ನಿರಾಣಿ ಅವರು ಮಾತನಾಡಿ, ಸರಕಾರ ಬದಲಾದೊಡನೆ ರಾಜ್ಯ ಶಿಕ್ಷಣ ನೀತಿ ತರಲು ಕಾಂಗ್ರೆಸ್ ಮುಂದಾಗಿದೆ. ಇದು ಪೂರ್ವಾಗ್ರಹಪೀಡಿತ ಕ್ರಮ ಎಂದು ಟೀಕಿಸಿದರು. ಇದರಿಂದ ಶಿಕ್ಷಣ ಕ್ಷೇತ್ರ ಮತ್ತು ಮಕ್ಕಳಿಗೆ ಪ್ರಯೋಜನ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ವ್ಯವಸ್ಥೆ ವಿಷಯದಲ್ಲಿ ಚೆಲ್ಲಾಟ ಮಾಡದಿರಿ ಎಂದು ಅವರು ಒತ್ತಾಯಿಸಿದರು. ಶಿಕ್ಷಣದ ವ್ಯವಸ್ಥೆ ಬದಲಾವಣೆ ಕ್ರಮವನ್ನು ಖಂಡಿಸುವುದಾಗಿ ಹೇಳಿದರು. ಸರಕಾರದ ನಿರ್ಧಾರ ಖಂಡಿಸಿ ಕೋಟಿ ಸಹಿ ಸಂಗ್ರಹ ಈಗಾಗಲೇ ಪ್ರಾರಂಭವಾಗಿದೆ ಎಂದು ವಿವರಿಸಿದರು.