ಬೆಂಗಳೂರು: ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿಯ ಅರಿವಿದ್ದರೂ ಕೇಂದ್ರ ಸರ್ಕಾರ ಲೋಕಸಭಾ ಸದಸ್ಯರಿಗೆ ನೀಡಬೇಕಾದ ಲೋಕಸಭಾ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯ ವಾರ್ಷಿಕ 5 ಕೋಟಿ ಹಣವನ್ನು ಪ್ರಸಕ್ತ ಸಾಲಿನಲ್ಲಿ ಕರ್ನಾಟಕದ ಲೋಕಸಭಾ ಸದಸ್ಯರಿಗೆ ಮತ್ತು ರಾಜ್ಯಸಭಾ ಸದಸ್ಯರಿಗೆ ಬಿಡುಗಡೆ ಮಾಡದೇ ದಿವಾಳಿತನವನ್ನು ಪ್ರದರ್ಶಿಸಿದೆ ಎಂದು ಪ್ರದೇಶ ಕಾಂಗ್ರೆಸ್ ಆರೋಪಿಸಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯದ ಲೋಕಸಭಾ ಸದಸ್ಯರಿಗೆ ನೀಡಬೇಕಾದ ಲೋಕಸಭಾ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯ ವಾರ್ಷಿಕ 5 ಕೋಟಿ ಹಣವನ್ನು ಪ್ರಸಕ್ತ ಸಾಲಿನಲ್ಲಿ ಕರ್ನಾಟಕದ ಲೋಕಸಭಾ ಸದಸ್ಯರಿಗೆ ಮತ್ತು ರಾಜ್ಯಸಭಾ ಸದಸ್ಯರಿಗೆ ಬಿಡುಗಡೆ ಮಾಡಿಲ್ಲ. ಪ್ರಸಕ್ತ ಸಾಲಿನಲ್ಲಿ ಒಟ್ಟು ಕರ್ನಾಟಕದ ಸದಸ್ಯರಿಗೆ 205 ಕೋಟಿ ಹಣವನ್ನು ಬಿಡುಗಡೆ ಮಾಡಬೇಕಾಗಿದ್ದು, ಕರ್ನಾಟಕದ ಬರಗಾಲದ ಪರಿಸ್ಥಿತಿಯ ಅರಿವಿದ್ದರೂ, ಹಣ ಬಿಡುಗಡೆ ಮಾಡದೇ ಕೇಂದ್ರದ ಮೋದಿ ಸರ್ಕಾರ ದಿವಾಳಿತನವನ್ನು ತೋರಿರುತ್ತದೆ. ಕರ್ನಾಟಕದ ಬಿಜೆಪಿ ಲೋಕಸಭಾ ಸದಸ್ಯರು ತಮ್ಮ ಪಾಲಿನ ಹಣವನ್ನು ಕೇಳದೆ ಕದ್ದು ಓಡಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ನಮ್ಮ ರಾಜ್ಯದ ಲೋಕಸಭಾ ಸದಸ್ಯರಿಗೆ 02-12-2023 ಕ್ಕೆ ಒಟ್ಟು 488.5 ಕೋಟಿ ರೂಪಾಯಿಗಳನ್ನು ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ದಿ ಯೋಜನೆಯ ಅಡಿಯಲ್ಲಿ ಹಣ ಬಿಡುಗಡೆ ಮಾಡಲು ಅವಕಾಶ ಇರುತ್ತದೆ. ಇದರಲ್ಲಿ ಇಲ್ಲಿಯವರೆಗೆ 225 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಒಟ್ಟಾರೆ 263.5 ಕೋಟಿ ಬಿಡುಗಡೆಗೆ ಬಾಕಿ ಇರುತ್ತದೆ. ಬಿಡುಗಡೆ ಆಗಿರುವ ಹಣದಲ್ಲಿ 40.94 ಕೋಟಿ ಉಪಯೋಗಿಸದೆ ಕೇಂದ್ರ ಸರ್ಕಾರದ ಖಾತೆಯಲ್ಲಿ ಬಾಕಿ ಇರುತ್ತದೆ. ಪ್ರಚಾರಕ್ಕಾಗಿ ಕರ್ನಾಟಕದಲ್ಲಿ ಬೊಬ್ಬೆ ಇಡುವ ಬಿಜೆಪಿಯ ಲೋಕಸಭಾ ಸದಸ್ಯರು ಕೇಂದ್ರದ ಅನುದಾನದ ಬಗ್ಗೆ ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ ಎಂದು ರಮೇಶ್ ಬಾಬು ಟೀಕಿಸಿದ್ದಾರೆ.
ರಾಜ್ಯದಲ್ಲಿ ತೀವ್ರವಾದ ಬರಗಾಲವಿದ್ದು, ತೋರಿಕೆಗಾಗಿ ಬರಪರಿಹಾರಕ್ಕಾಗಿ ಒತ್ತಾಯಿಸುವ ರಾಜ್ಯದ ಬಿಜೆಪಿ ನಾಯಕರು ಮತ್ತು ಬಿಜೆಪಿ ಸಂಸದರು, ಕೇಂದ್ರದ ಸರ್ಕಾರ ನಿಯಮಾನುಸಾರ ನೀಡಬೇಕಿದ್ದ ಲೋಕಸಭಾ ಸದಸ್ಯರ ಅನುದಾನ ಬಿಡುಗಡೆಗೆ ಮತ್ತು ಈ ಹಣವನ್ನು ಆದ್ಯತೆಯ ಮೇರೆಗೆ ಬರಪರಿಹಾರ ಕಾಮಗಾರಿಗಳಿಗೆ ಬಳಸಿಕೊಳ್ಲು ಅನುವು ಮಾಡಿಕೊಡುವಂತೆ ಇದುವರೆಗೆ ಕೇಂದ್ರ ಸರ್ಕಾರವನ್ನು ಕೇಳಿರುವುದಿಲ್ಲ. ಕಾನೂನಿನ ಪ್ರಕಾರ ಅವಕಾಶವಿರುವ ಹಣವನ್ನೇ ಬಳಸದ ರಾಜ್ಯ ಬಿಜೆಪಿ ಸಂಸದರು ಮತ್ತು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ಕರ್ನಾಟಕಕ್ಕೆ ಮೋಸ ಎಸಗಿದ್ದಾರೆ ಎಂದು ರಮೇಶ್ ಬಾಬು ದೂರಿದ್ದಾರೆ.
ಬಿಜೆಪಿ ಸಂಸದರ ಮೌನ..!
ಕರ್ನಾಟಕದಲ್ಲಿ 1952 ಯಿಂದ ಇಲ್ಲಿಯವರೆಗೆ 17 ಲೋಕಸಭಾ ಚುನಾವಣೆಗಳು ನಡೆದಿದ್ದು, 2004 ರಿಂದ 2019 ರವರೆಗೆ ಬಿಜೆಪಿಗೆ ರಾಜ್ಯದ ಜನ 18, 19, 17 ಮತ್ತು 25 ಸ್ಥಾನಗಳನ್ನು ನೀಡಿದ್ದರೂ, ರಾಜ್ಯದ ನೆಲ, ಜಲ, ಅಭಿವೃದ್ಧಿ ಮತ್ತು ಭಾಷೆಯ ವಿಚಾರ ಬಂದಾಗ ಪಲಾಯನ ಮಾಡುತ್ತಾರೆ. 1991 ರ ಲೋಕಸಭಾ ಚುನಾವಣೆಯವರೆಗೆ ಕರ್ನಾಟಕದಲ್ಲಿ ರಾಜ್ಯದ ಮತದಾರರು ಬಿಜೆಪಿಗೆ ಅಥವಾ ಹಿಂದಿನ ಜನಸಂಘಕ್ಕೆ ಯಾವುದೇ ಅವಕಾಶವನ್ನು ನೀಡಿರಲಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 1998 ರ ಲೋಕಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗ್ಡೆರವರ ಲೋಕಶಕ್ತಿಯ ಮೂಲಕ ಕರ್ನಾಟಕದಲ್ಲಿ ಬೇರು ಬಿಟ್ಟಿಕೊಂಡ ಭಾರತೀಯ ಜನತಾ ಪಕ್ಷ ತದನಂತರ ಲೋಕಸಭೆಯಲ್ಲಿ ಹೆಚ್ಚು ಹೆಚ್ಚು ಸ್ಥಾನಗಳನ್ನು ಗಳಿಸಿರುತ್ತದೆ. ಮೋದಿಯ ಹೆಸರನ್ನೇ ನೆಚ್ಚಿಕೊಂಡಿರುವ ಕರ್ನಾಟಕದ ಬಿಜೆಪಿ ಲೋಕಸಭಾ ಸದಸ್ಯರು ನಮ್ಮ ರಾಜ್ಯಕ್ಕೆ ಅನುದಾನಗಳನ್ನು ತರುವಲ್ಲಿ, ತೆರಿಗೆಯ ಪಾಲನ್ನು ಕೇಳುವಲ್ಲಿ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ಪಡೆಯುವಲ್ಲಿ ಕರ್ನಾಟಕದ ಜನರಿಗೆ ಉದ್ಯೋಗ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಇದೇ ಕಾರಣಕ್ಕಾಗಿ ಬಿಜೆಪಿಯ ಲೋಕಸಭಾ ಸದಸ್ಯರು ತಮಗೆ ನಿಯಮಾನಸಾರ ದೊರೆಯಬೇಕಾದ ಅನುದಾನಗಳ ವಿಚಾರದಲ್ಲೂ ಧ್ವನಿ ಎತ್ತದೆ ಆತ್ಮ ವಂಚನೆ ಮಾಡಿಕೊಂಡಿದ್ದಾರೆ ಕರ್ನಾಟಕದ ಬರಗಾಲದ ಬಗ್ಗೆ ಒಣ ಭಾಷಣ ಮಾಡುವ ರಾಜ್ಯ ಬಿಜೆಪಿ ನಾಯಕರು ಬಿಜೆಪಿ ಸಂಸದರು ಕೇಂದ್ರದ ತಮ್ಮ ಪಾಲಿನ ಅನುದಾನಗಳನ್ನು ಪಡೆದು ಅದನ್ನು ಬರ ಪರಿಹಾರ ನಿಧಿಗೆ ನೀಡಲು ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ ಮತ್ತು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ರಾಜ್ಯ ಬಿಜೆಪಿ ಸಂಸದರ ಮೌನವನ್ನು ಖಂಡಿಸುತ್ತದೆ. ತೆರಿಗೆಯ ಪಾಲನ್ನು ಕೇಳುವಲ್ಲಿ, ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ಪಡೆಯುವಲ್ಲಿ, ಕರ್ನಾಟಕದ ಜನರಿಗೆ ಉದ್ಯೋಗ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಇದೇ ಕಾರಣಕ್ಕಾಗಿ ಬಿಜೆಪಿಯ ಲೋಕಸಭಾ ಸದಸ್ಯರು ತಮಗೆ ನಿಯಮಾನಸಾರ ದೊರೆಯಬೇಕಾದ ಅನುದಾನಗಳ ವಿಚಾರದಲ್ಲೂ ಧ್ವನಿ ಎತ್ತದೆ ಆತ್ಮ ವಂಚನೆ ಮಾಡಿಕೊಂಡಿದ್ದಾರೆ. ಕರ್ನಾಟಕದ ಬರಗಾಲದ ಬಗ್ಗೆ ಒಣ ಭಾಷಣ ಮಾಡುವ ರಾಜ್ಯ ಬಿಜೆಪಿ ನಾಯಕರು ಬಿಜೆಪಿ ಸಂಸದರು ಕೇಂದ್ರದ ತಮ್ಮ ಪಾಲಿನ ಅನುದಾನಗಳನ್ನು ಪಡೆದು ಅದನ್ನು ಬರ ಪರಿಹಾರ ನಿಧಿಗೆ ನೀಡಲು ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ ಮತ್ತು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ರಾಜ್ಯ ಬಿಜೆಪಿ ಸಂಸದರ ಮೌನವನ್ನು ಖಂಡಿಸುತ್ತದೆ ಎಂದು ರಮೇಶ್ ಬಾಬು ಹೇಳಿದ್ದಾರೆ.