ಯಾದಗಿರಿ: ಸೈಬರ್ ಕ್ರೈಮ್ ಠಾಣೆಯ ಪಿಎಸ್ಐ ಪರಶುರಾಮ (34) ಎಂಬವರು ಶುಕ್ರವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಪ್ರಭಾವಿಗಳಿಂದ ಹಣಕ್ಕಾಗಿ ಒತ್ತಡ ಹೇರಲಾಗಿದ್ದು ಇದರಿಂದ ನೊಂದಿದ್ದ ಪಿಎಸ್ಐ ಪರಶುರಾಮ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಮೂರು ವರ್ಷಗಳಿಂದ ಯಾದಗಿರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು ತಮ್ಮ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪಿಎಸ್ಐ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಪುತ್ರ ಪಂಪಣ್ಣಗೌಡ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಪಿಎಸ್ಐ ಪರಶುರಾಮ ಅವರು ಯಾದಗಿರಿ ನಗರ ಠಾಣೆಗೆ ವರ್ಗಾವಣೆಗಾಗಿ ಸ್ಥಳೀಯ ನಾಯಕರು 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 30 ಲಕ್ಷ ರೂ. ನೀಡಿ ವರ್ಗಾವಣೆಯಾಗಿದ್ದರು. ಆದರೆ, ಒಂದು ವರ್ಷದೊಳಗೆ ಅವರನ್ನು ಯಾದಗಿರಿ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಪಿಎಸ್ಐ ಪರಶುರಾಮ್ ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ.
ಈ ನಡುವೆ, ಪಿಎಸ್ಐ ಸಾವಿಗೆ ಕಾರಣರಾಗಿರುವ ಶಾಸಕ ಚನ್ನಾರೆಡ್ಡಿ ಪಾಟೀಲ್ಆವರನ್ನು ಬಂಧಿಸುವಂತೆ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.