ರಾಮನಗರ: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿ ಭ್ರಷ್ಟಾಚಾರದ ವಿರುದ್ಧವೇ ಸುಳ್ಳು ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹುನ್ನಾರವನ್ನು ಜನಸಾಮಾನ್ಯರಿಗೆ ನಾವು ತಿಳಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಪರಮೇಶ್ವರ್, ದಾರಿ ಉದ್ದಕ್ಕೂ ಅನೇಕ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅದರಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಹಿಂದಕ್ಕೆ ಹೋಗಿದೆ ಪ್ರಾದೇಶಿಕ ಪಕ್ಷ ಜೆಡಿಎಸ್ ಮುಂದಕ್ಕೆ ಬಂದಿದೆ. ಮೈಸೂರ್ ಚಲೋ ಪಾದಯಾತ್ರೆ ಮಾಡಬಾರದು ಎಂದು ರಾಜಾರೋಷವಾಗಿ ಹೇಳಿದವರ ಫೋಟೋ ಈಗ ಮುಂದೆ ಬಂದಿದೆ. ಪಾದಯಾತ್ರೆ ಮಾಡಲೇಬೇಕು ಎಂದು ಘಂಟಾಘೋಷವಾಗಿ ಹೇಳಿದ ಬಿಜೆಪಿಯ ರಾಜ್ಯ ಅಧ್ಯಕ್ಷರ ಫೋಟೋ ಹಿಂದಕ್ಕೆ ಹೋಗಿದೆ ಎಂದು ಟೀಕಿಸಿದರು.
ಭ್ರಷ್ಟಾಚಾರಿಗಳ ಭ್ರಷ್ಟಾಚಾರದ ಯಾತ್ರೆ ಎಂದು ಬಿಜೆಪಿಯವರೇ ಹೇಳಿದ್ದಾರೆ. ಸತ್ಯವನ್ನು ಮರೆಮಾಚಲು ಎರಡು ಪಕ್ಷಗಳು ಹೊರಟಿವೆ. ನಾಲ್ಕು ವರ್ಷ ಕರ್ನಾಟಕದಲ್ಲಿ ಭ್ರಷ್ಟ ಆಡಳಿತ ನಡೆಸಿ, 40% ಕಮಿಷನ್ ತಿಂದ ನಿಮಗೆ ಕರ್ನಾಟಕದ ಜನತೆ 2023ರ ಚುನಾವಣೆಯಲ್ಲಿ ಬುದ್ದಿ ಕಲಿಸಿದ್ದಾರೆ ಎಂದ ಪರಮೇಶ್ವರ್, ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಆದರೆ ಕಾಂಗ್ರೆಸ್ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳಲು ಬಂದಿದ್ದಾರೆ. ಭ್ರಷ್ಟ ಜನರಿಗೆ ಯಾವಾಗಲೂ ಭ್ರಷ್ಟಾಚಾರದ ಬಗ್ಗೆಯೇ ಯೋಚನೆ ಇರುತ್ತದೆ. ಇದು ಬಿಜೆಪಿಯ ಲಕ್ಷಣ ಎಂದರು.
ಬಿಜೆಪಿಯವರೇ ನಿಮ್ಮ ಕಾಲದಲ್ಲಿ 21 ಹಗರಣಗಳು ನಡೆದವಲ್ಲ ಇದರ ಬಗ್ಗೆ ರಾಜ್ಯದ ಜನರಿಗೆ ಉತ್ತರ ಕೊಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್, ಭೋವಿ ಅಭಿವೃದ್ಧಿ ನಿಗಮ, ಪ್ರವಾಸೋದ್ಯಮ ಇಲಾಖೆ ಹೀಗೆ ಹಗರಣ ನಡೆದಿದೆ. ಬಿಜೆಪಿಯ ಎಲ್ಲಾ ಹಗಡಗಳನ್ನು ಹೊರಗೆ ತೆಗೆಯುತ್ತೇವೆ. ಜನರ ಮುಂದೆ ಇಡುತ್ತೇವೆ ಎಂದ ಅವರು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿಯ ಹಗರಣಗಳನ್ನು ಜನರ ಮುಂದೆ ಇಟ್ಟು ಸತ್ಯವನ್ನು ತಿಳಿಸಲು ಹೊರಟಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಗೆ ನಾವು ಛೀಮಾರಿ ಹಾಕುವುದು ಬೇಡ ಜನರೇ ಛೀಮಾರಿ ಹಾಕುತ್ತಾರೆ ಎಂದರು.