ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ; ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಆಕ್ಷೇಪ; ಕಾನೂನು ಸಂಘರ್ಷದ ರಣಕಹಳೆ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆಂಬ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ರಾಜ್ಯಪಾಲರ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ರಾಜಕೀಯ ವಿಶ್ಲೇಷಕರೂ, ಕಾನೂನು ತಜ್ಞರೂ ಆಗಿರುವ ಮಾಜಿ ಶಾಸಕ ರಮೇಶ್ ಬಾಬು, ಪ್ರಾಸಿಕ್ಯೂಷನ್ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರು ‘ಹೈಕೋರ್ಟ್‌ ಹಿಂದೆ ನೀಡಿದ್ದ ಆದೇಶ’ವನ್ನು ಪರಿಗಣಿಸಿಲ್ಲ ಎಂಬ ಬಗ್ಗೆ ಬೊಟ್ಟುಮಾಡಿದ್ದಾರೆ.

ಕೆಪಿಸಿಸಿ ಮಾಧ್ಯಮ-ಸಂವಹನ ವಿಭಾಗದ ಅಧ್ಯಕ್ಷರೂ ಆಗಿರುವ ರಮೇಶ್ ಬಾಬು, ರಾಜ್ಯಪಾಲರ ಆತುರದ ನಡೆಯು ರಾಜಕೀಯ ಪ್ರೇರಿತವಾಗಿದ್ದು, ಇದು ಅನಗತ್ಯ ಕಾನೂನು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಿದ್ದಾರೆ.

ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ದದ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಆದೇಶ, ಸಲಹೆಗಳನ್ನು ರಾಜ್ಯಪಾಲರು ಗೌರವಿಸಿಲ್ಲ. ಇದು ಪಕ್ಷಪಾತೀಯ ನಡೆಯಾಗಿದ್ದು, ಇದರಿಂದ ಅನಗತ್ಯ ಕಾನೂನು ಸಂಘರ್ಷ ಏರ್ಪಡುತ್ತದೆಯೇ ಹೊರತು ರಾಜ್ಯಪಾಲರಿಂದ  ಸಾಮಾಜಿಕ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ ಎಂದು ರಮೇಶ್ ಬಾಬು ಅವರು ತಮ್ನದೇ ದಾಟಿಯಲ್ಲಿ ಹೇಳಿದ್ದಾರೆ.

ರಾಜ್ಯಪಾಲರ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಾರದು ಎಂದೇನಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷವು ಸೂಕ್ತ ಕಾನೂನು ಹೋರಾಟ ನಡೆಲು ಅವಕಾಶವಿದೆ. ಅದಕ್ಕೆ ಪಕ್ಷ ಸಿದ್ದವಾಗಿದೆ ಎಂದು ರಮೇಶ್ ಬಾಬು ಪ್ರತಿಪಾದಿಸಿದ್ದಾರೆ.

ಹೆಚ್ಡಿಕೆ ವಿರುದ್ದ ರಾಜ್ಯಪಾಲರ ನಿಲುವೇನು?

ರಾಜಭವನವು ಬಿಜೆಪಿ-ಜೆಡಿಎಸ್ ನಾಯಕರ ವಿರುದ್ದದ ಪ್ರಕರಣಗಳಲ್ಲಿ ತೋರದ ಆಸಕ್ತಿಯನ್ನು ಸಿದ್ದರಾಮಯ್ಯ ವಿರುದ್ದ ತೋರಿಸಿರುವುದು ವಿಷಾದದ ಸಂಗತಿ ಎಂದು ವ್ಯಾಖ್ಯಾನಿಸಿರುವ ವಕೀಲರೂ ಆದ ರಮೇಶ್ ಬಾಬು, ಕುಮಾರಸ್ವಾಮಿ ವಿರುದ್ದ ಸಲ್ಲಿಸಿರುವ ಮನವಿ ಬಗ್ಗೆಯೂ ರಾಜ್ಯಪಾಲರು ಸೂಕ್ತ ರೀತಿ ಕ್ರಮಕೈಗೊಳ್ಳುತ್ತಾರಾ? ಸಮರ್ಪಕ ಸಾಕ್ಷ್ಯಾಧಾರಗಳೊಂದಿಗೆ ತನಿಖಾ ವರದಿಯನ್ನು ಸಲ್ಲಿಸಿದ್ದರೂ ರಾಜ್ಯಪಾಲರು ಕುಮಾರಸ್ವಾಮಿ ಪ್ರಕರಣದಲ್ಲಿ ತಿರಸ್ಕಾರ ಮಾಡುತ್ತಾರ ಎಂಬುದನ್ನು ಕಾದು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Related posts