ರಾಯಚೂರು ವಿವಿಯಿಂದ ST ಸಮುದಾಯಕ್ಕೆ ಅನ್ಯಾಯ: ರಾಜ್ಯಪಾಲರಿಗೆ ದೂರು

ಬೆಂಗಳೂರು: ರಾಯಚೂರು ವಿಶ್ವವಿದ್ಯಾಲಯದಿಂದ ಆಹ್ವಾನಿಸಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಹ್ವಾನಿಸಿರುವ ನೋಟಿಫಿಕೇಷನ್ ತಕ್ಷಣ ರದ್ದುಗೊಳಿಸಿ ಪರಿಶಿಷ್ಟ ಪಂಗಡಕ್ಕೆ ಶೇ. 7 ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ನಾಯಕರ ಒಕ್ಕೂಟ ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್ ಅವರಿಗೆ ಮನವಿ ಸಲ್ಲಿಸಿದೆ.

ರಾಜಭವನದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್ ಅವರನ್ನು ಭೇಟಿ ಮಾಡಿದ ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ನೇತೃತ್ವದ ನಿಯೋಗ, ರಾಯಚೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಕಲ್ಯಾಣ ಕರ್ನಾಟಕ ವೃಂದದಲ್ಲಿರುವ (371-J) ಒಟ್ಟು 18 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಎಲ್ಲ ವರ್ಗದ ಅರ್ಹ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸುವಾಗ ಪ್ರತಿ ಅಭ್ಯರ್ಥಿಯಿಂದ 1000/-, 2000/- ರೂ. ಶುಲ್ಕ ಪಾವತಿಸಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿನ 18 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಲ್ಲಿ ಸರ್ಕಾರದ ನಿಯಮಾವಳಿಗಳ ಪ್ರಕಾರ ಶೇ.7 ರಷ್ಟು ಮೀಸಲಾತಿಯನ್ನು ಪರಿಶಿಷ್ಟ ಪಂಗಡದ ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ ನೀಡಲೇಬೇಕು. ಅಂದರೆ ಕನಿಷ್ಠ 2 ಹುದ್ದೆಗಳನ್ನಾದರೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡಬೇಕಿತ್ತು. ಆದರೆ ರಾಯಚೂರು ವಿಶ್ವವಿದ್ಯಾಲಯ ಪರಿಶಿಷ್ಟ ಪಂಗಡ ಸಮುದಾಯದ ಅಭ್ಯರ್ಥಿಗಳಿಗೆ ಯಾವುದೇ ಹುದ್ದೆಯನ್ನು ಮೀಸಲಿಡದೆ ಅನ್ಯಾಯ ಮಾಡಿದೆ ಎಂದು ತಿಳಿಸಲಾಯಿತು.

ರೋಸ್ಟರ್ ಹೆಸರಿನ ನೆಪ ಹೇಳಿ ಪರಿಶಿಷ್ಟ ಪಂಗಡದ ಸಮುದಾಯದ ಪ್ರತಿಭಾನ್ವಿತರಿಗೆ ರಾಯಚೂರು ವಿ.ವಿ. ಅನ್ಯಾಯ ಮಾಡಿದೆ. ಹೀಗಾಗಿ ತಕ್ಷಣ ಈ ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸಬೇಕು. ಜೊತೆಗೆ ಈ ನೇಮಕಾತಿ ಅಧಿಸೂಚನೆ ರದ್ದುಗೊಳಿಸಿ ಹೊಸ ಅಧಿಸೂಚನೆ ಹೊರಡಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹಾಗೂ ರಾಯಚೂರು ವಿಶ್ವವಿದ್ಯಾಲಯಕ್ಕೆ ತಕ್ಷಣ ಸೂಚನೆ ನೀಡಬೇಕು ಎಂದು ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು ರಾಜ್ಯಪಾಲರಿಗೆ ಮನವಿ ಮಾಡಿದರು.

ಅನೇಕ ವರ್ಷಗಳಿಂದ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ಹೆಚ್ಚಾಗಿದೆ. ಇದರಿಂದಲೂ ನಾಯಕ/ ವಾಲ್ಮೀಕಿ ಸಮುದಾಯ ನಲುಗಿದೆ. ದಯಮಾಡಿ ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಆರಂಭದಿಂದಲೂ ತುಳಿತಕ್ಕೊಳಗಾಗಿರುವ ಪರಿಶಿಷ್ಟ ಪಂಗಡ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಒಕ್ಕೂಟದ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್, ಪರಿಶಿಷ್ಟ ಪಂಗಡಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಸಂಖ್ಯೆ ಎಷ್ಟಿದೆ? ರಾಯಚೂರು ವಿಶ್ವ ವಿದ್ಯಾಲಯದಲ್ಲಿ ಮಾತ್ರ ಹೀಗಾಗಿದೆಯಾ? ಅಥವಾ ಎಲ್ಲ ವಿವಿಗಳಲ್ಲೂ ಹೀಗಾಗಿದೆಯಾ ಎಂದು ರಮೇಶ್ ಹಿರೇಜಂಬೂರು ಅವರಿಂದ ಮಾಹಿತಿ ಪಡೆದರು.

ನಂತರ ನಿಯೋಗಕ್ಕೆ ಸ್ಪಂದಿಸಿದ ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್, ರಾಯಚೂರು ವಿ.ವಿ.ಯಿಂದ ಆಗಿರುವ ಅನ್ಯಾಯ ಸರಿಪಡಿಸಲಾಗುವುದು ಎಂದು ಸ್ವತಃ ಅವರೇ, ತಕ್ಷಣ ಉನ್ನತ ಶಿಕ್ಷ ಇಲಾಖೆ ಪ್ರಧಾನ ಕಾರ್ಯದರ್ಶಿ ಕಚೇರಿಗೆ ದೂರವಾಣಿ ಕರೆ ಮಾಡಿದರು. ಆದರೆ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಇರದ ಕಾರಣ ತಮ್ಮ ಆಪ್ತ ಕಾರ್ಯದರ್ಶಿಗಳನ್ನು ಕರೆದು ರಾಯಚೂರು ವಿವಿಯಲ್ಲಿ ಆಗಿರುವ ಅನ್ಯಾಯದ ಸಮಗ್ರ ಮಾಹಿತಿ ಪಡೆದು ಸರಿಪಡಿಸಲು ಸೂಚನೆ ನೀಡಬೇಕು ಎಂದು ತಾಕೀತು ಮಾಡಿದರು.

ನಿಯೋಗದಲ್ಲಿ ಕರ್ನಾಟಕ ನಾಯಕರ ಒಕ್ಕೂಟದ ಉಪಾಧ್ಯಕ್ಷರಾದ ವೀರೇಶ್ ನಾಯಕ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಜನಿ ಎಂ.ಆರ್., ರಾಜ್ಯ ಸಂಘಟನಾ ಕಾರ್ಯದರ್ಶಿ ಗರುಡ ನಾಯಕ್, ರಾಯಚೂರು ಜಿಲ್ಲಾಧ್ಯಕ್ಷ ಡಾ. ರವಿಕುಮಾರ್ ಉಪಸ್ಥಿತರಿದ್ದರು.

Related posts