ಬೆಂಗಳೂರು: ಆರ್ಎಸ್ಎಸ್ ಪ್ರಣೀತ ಬಿಜೆಪಿಯು ಸಂವಿಧಾನವನ್ನು ನಾಶ ಮಾಡಲು ಹೊರಟಿದೆ ಎಂದು ಎಐಸಿಸಿ ಎಸ್.ಸಿ ವಿಭಾಗದ ಅಧ್ಯಕ್ಷರಾದ ರಾಜೇಶ್ ಲಿಲೋತಿಯಾ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಎಸ್.ಸಿ ವಿಭಾಗದ ಅಧ್ಯಕ್ಷರಾದ ರಾಜೇಶ್ ಲಿಲೋತಿಯಾ, ಆರ್ಎಸ್ಎಸ್ ಪ್ರಣೀತ ಬಿಜೆಪಿಯು ಸಂವಿಧಾನವನ್ನು ನಾಶ ಮಾಡಲು ಹೊರಟಿದೆ. ಸಂವಿಧಾನದ ಕಾರಣಕ್ಕೆ ಶೋಷಿತ ವರ್ಗದ ಜನರು ಅಧಿಕಾರ ಸೇರಿದಂತೆ ಒಂದಷ್ಟು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದನ್ನು ನಾಶ ಮಾಡಲು ಈ ಎರಡು ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂದು ದೂರಿದರು.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಅನೇಕರು ಸಂವಿಧಾನದ ರಕ್ಷಣೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದರ ಸಲುವಾಗಿ ನಾವು ಕಳೆದ ಎರಡು ವರ್ಷಗಳ ಹಿಂದೆ “ಸಂವಿಧಾನ ರಕ್ಷಕ್” ಎನ್ನುವ ಕಾರ್ಯಕ್ರಮ ಜಾರಿಗೆ ತಂದೆವು ಎಂದ ಅವರು, ಇದುವರೆಗು ದೇಶದಾದ್ಯಂತ ಸುಮಾರು 3 ಲಕ್ಷ ಮಂದಿ ಸಂವಿಧಾನ ರಕ್ಷಕರಾಗಿ ನೋಂದಾಯಿಸಿಕೊಂಡಿದ್ದಾರೆ. ನವೆಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಈ ವರ್ಷ ನವೆಂಬರ್ 26 ರಂದು 75 ವಸಂತಗಳು ತುಂಬಲಿದ್ದು ಇದನ್ನು ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡಲಾಗುವುದು ಎಂದರು.
ಈ ಕಾರ್ಯಕ್ರಮವನ್ನು ದೆಹಲಿಯ ತಾಲ್ ಕಥೋರ ಸ್ಟೇಡಿಯಂ ಅಲ್ಲಿ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಕರ್ನಾಟಕದ ಸ್ನೇಹಿತರನ್ನು ಆಹ್ವಾನಿಸಲು ಬಂದಿದ್ದೇನೆ ಎಂದ ಅವರು, ಸಂವಿಧಾನ ರಕ್ಷಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೂಗಿ ಹೇಳಬೇಕು. ನಾವು ಇರುವ ತನಕ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಗೆ ಅವಕಾಶ ನೀಡುವುದಿಲ್ಲ. ಸಂವಿಧಾನ ಮುಗಿಸಲು ಸಾಧ್ಯವಿಲ್ಲ ಎಂದರು.