ಬೆಂಗಳೂರು : ರಾಜಧಾನಿಯ ಕೆ.ಆರ್ ವೃತ್ತದ ನೃಪತುಂಗಾ ರಸ್ತೆಯಲ್ಲಿ ಶಿಲ್ಪಾ ಫೌಂಡೇಶನ್ ಸಂಸ್ಥೆಯು ಬಹುರಾಷ್ಟ್ರೀಯ ಕಂಪೆನಿಯಾದ ಸೇಪಿಯನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಇದರ ಸಿ.ಎಸ್.ಆರ್ ಅಡಿಯಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಸ್ಮಾರ್ಟ್ ಬಸ್ ನಿಲ್ದಾಣವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದರು.
ಈ ಸ್ಮಾರ್ಟ್ ನಿಲ್ದಾಣವು ಹಲವು ವೈಶಿಷ್ಟತೆಗಳಿಂದ ಕೂಡಿದ್ದು ಇದು ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ಇದರಲ್ಲಿರುವ ಸೌಲಭ್ಯಗಳನ್ನು ಸಾರ್ವಜನಿಕರು ಉತ್ತಮ ರೀತಿಯಲ್ಲಿ ಬಳಕೆ ಮಾಡಿದಲ್ಲಿ ಯೋಜನೆಯು ಯಶಸ್ವಿಯಾಗಲಿದೆ. ಸ್ಮಾರ್ಟ್ ನಿಲ್ದಾಣವು ಇತರ ಬಸ್ ನಿಲ್ದಾಣಗಳಿಗಿಂತ ವಿಭಿನ್ನವಾಗಿದ್ದು ಸಾರ್ವಜನಿಕರ ಪ್ರತ್ಯೇಕವಾಗಿ ಮಹಿಳೆಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಿದೆ. ಇಲ್ಲಿರುವ ಪ್ಯಾನಿಕ್ ಬಟನ್ ಹಾಗೂ ಸಿಸಿ ಕ್ಯಾಮರಾಗಳು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಇಂತಹ ಯೋಜನೆಗಳು ಇನ್ನೂ ವಿಸ್ತರಣೆಯಾಗಲಿ ಎಂದು ಸಚಿವ ರಾಮಲಿಂಗ ರೆಡ್ಡಿ ಅಭಿಪ್ರಾಯಪಟ್ಟರು.
ಶಿಲ್ಪಾ ಫೌಂಡೇಶನ್ ಸೇಪಿಯನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಪರಿವರ್ತನೆಯನ್ನು ತರಲು ಹಾಗೂ ಸಾರ್ವಜನಿಕರಿಗೆ ಅನುಕೂಲಕರ ಮತ್ತು ಹೊಸ ಅನುಭವವನ್ನು ನೀಡುವ ನಿಟ್ಟಿನಲ್ಲಿ ಬ್ರಾಂಡ್ ಬೆಂಗಳೂರು ಅಡಿಯಲ್ಲಿ ನಗರದ ಪ್ರಮುಖ 3 ಪ್ರದೇಶಗಳಲ್ಲಿ ಸುಸಜ್ಜಿತ ಮತ್ತು ಅತ್ಯಾಧುನಿಕವಾದ ಸ್ಮಾರ್ಟ್ ಬಸ್ಸು ನಿಲ್ದಾಣಗಳನ್ನು ರೂಪಿಸಿದೆ. ಸದರಿ ಯೋಜನೆಯು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತ ಹಾಗೂ ಪ್ರಯಾಣಿಕ ಸ್ನೇಹಿ ಬಸ್ ನಿಲ್ದಾಣವಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಸ್ಮಾರ್ಟ್ ನಿಲ್ದಾಣದ ವೈಶಿಷ್ಟ್ಯಗಳು:
-
ಬೆಂಗಳೂರಿನಲ್ಲಿ ಪ್ರಯಾಣಿಕ ಸ್ನೇಹಿ ಹಾಗೂ ಅತ್ಯಾಧುನಿಕ ಶೈಲಿಯ ಗುಣಮಟ್ಟದ ನಿಲ್ದಾಣವನ್ನು ಕಲ್ಪಿಸುವುದು ಸ್ಮಾರ್ಟ್ ನಿಲ್ದಾಣದ ಉದ್ದೇಶವಾಗಿದೆ. ಅದಕ್ಕಾಗಿಯೇ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅತಿ ಉಪಯುಕ್ತವಾಗುವ ರೀತಿಯಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ.
-
ಸಿಸಿಟಿವಿ ಕ್ಯಾಮರಾ: ಸ್ಮಾರ್ಟ್ ಬಸ್ ನಿಲ್ದಾಣದಲ್ಲಿ 24/7 ಸಿಸಿ ಕ್ಯಾಮರಾಗಳು ಕಾರ್ಯಾಚರಿಸಲಿವೆ. ಹಾಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುತ್ತದೆ. ಸಿಸಿ ಕ್ಯಾಮರಾಗಳು ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕ ಹೊಂದಿರಲಿದ್ದು ಸ್ಥಳೀಯ ಠಾಣಾ ಪೊಲೀಸರ ನಿರೀಕ್ಷಣೆಯಲ್ಲಿರಲಿದೆ.
-
ಪ್ಯಾನಿಕ್ ಬಟನ್: ಬಸ್ ನಿಲ್ದಾಣದಲ್ಲಿ ಪ್ರಮುಖವಾಗಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಥವಾ ಸಾರ್ವಜನಿಕರಿಗೆ ಮುಖ್ಯವಾಗಿ ಮಹಿಳೆಯರಿಗೆ ಯಾವುದೇ ರೀತಿಯ ಅಪಾಯ ಉಂಟಾಗುವ ಸನ್ನಿವೇಶದಲ್ಲಿ ಪ್ಯಾನಿಕ್ ಬಟನ್ ಒತ್ತಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ ತಲುಪಲಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಅಪಾಯಕ್ಕೊಳಗಾದವರ ರಕ್ಷಣೆ ಮಾಡಲಿದ್ದಾರೆ.
-
ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್:ಸ್ಮಾರ್ಟ್ ಬಸ್ಸು ನಿಲ್ದಾಣದಲ್ಲಿ ಯಾವುದೇ ಸಂಧರ್ಭದಲ್ಲಿ ಮಹಿಳೆಯರಿಗೆ 24/7 ಸ್ಯಾನಿಟರಿ ಪ್ಯಾಡ್ ಗಳು ದೊರೆಯಲಿವೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪ್ಯಾಡ್ ಗಳನ್ನು ಸ್ವೀಕರಿಸಿಕೊಳ್ಳಬಹುದು.
-
ಚಾರ್ಜಿಂಗ್ ಪಾಯಿಂಟ್ಸ್: ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಥವಾ ಸಾರ್ವಜನಿಕರಿಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಚಾರ್ಜಿಂಗ್ ಮಾಡಲು ಚಾರ್ಜಿಂಗ್ ಪಾಯಿಂಟ್ ಗಳು ಇರಲಿವೆ. ದಿನದ 24 ಗಂಟೆಗಳೂ ಇವೆ ಕಾರ್ಯರೂಪದಲ್ಲಿರುತ್ತವೆ.
-
IOT ಬೇಸ್ಡ್ ಗಾರ್ಬೇಜ್ ಬಿನ್: ಬಸ್ಸು ನಿಲ್ದಾಣದಲ್ಲಿ ಸೆನ್ಸರ್ ಬೇಸ್ಡ್ ಡಸ್ಟ್ ಬಿನ್ ಅಳವಡಿಸಲಾಗಿದ್ದು, ಒಣ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳನ್ನು ವಿಂಗಡಿಸಿ ತ್ಯಾಜ್ಯ ಶೇಖರಿಸಲಿದ್ದು ತ್ಯಾಜ್ಯ ತುಂಬಿದ ತಕ್ಷಣದಲ್ಲಿ ಆನ್ ಲೈನ್ ಮೂಲಕ ನಿರ್ವಾಹಕರಿಗೆ ಸೈರನ್ ಮೂಲಕ ಮಾಹಿತಿ ತಲುಪಲಿದ್ದು ಕೂಡಲೇ ತ್ಯಾಜ್ಯ ವಿಲೇವಾರಿ ಮಾಡಬಹುದಾಗಿದೆ.
-
ಬಸ್ಸುಗಳ ವಿವರ: ಬಸ್ಸು ನಿಲ್ದಾಣದಲ್ಲಿ ನಾಲ್ಕು ಡಿಸ್ಪ್ಲೇಗಳನ್ನು ಅಳವಡಿಸಿದ್ದು ಒಂದರಲ್ಲಿ ಬಿ.ಎಂ.ಟಿ.ಸಿ ಬಸ್ಸುಗಳ ವಿವರ ಲಭ್ಯವಾಗಲಿದೆ.
-
ರೈನ್ ಹಾರ್ವೆಸ್ಟಿಂಗ್ ಸಿಸ್ಟಮ್: ಮಳೆ ನೀರನ್ನು ಸಂಗ್ರಹಿಸಿ ನೀರು ಪೋಳಾಗದಂತೆ ನೀರನ್ನು ಗಿಡಗಳಿಗೆ ಹಾಗೂ ಇಂಗು ಗುಂಡಿಗಳಿಗೆ ಬಿಡಲಾಗುತ್ತದೆ.
-
ಸ್ನ್ಯಾಕ್ ವೆಂಡಿಂಗ್ ಮೆಷಿನ್: ಬಸ್ಸು ನಿಲ್ದಾಣದಲ್ಲಿ ಸ್ನ್ಯಾಕ್ ವೆಂಡಿಂಗ್ ಮೆಷಿನ್ ಅಳವಡಿಸಲು ಸ್ಥಳ ಮೀಸಲಿರಿಸಿದ್ದು ಸ್ನ್ಯಾಕ್ ವೆಂಡಿಂಗ್ ಮೆಷಿನ್ ಕೂಡಾ ಅಳವಡಿಸಬಹುದಾಗಿದೆ.
-
ಯಾವುದೇ ರೀತಿಯ ಜಾಹೀರಾತುಗಳನ್ನು ಅಳವಡಿಸಲಾಗುವುದಿಲ್ಲ. ಡಿಸ್ಪ್ಲೇಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಬಿಬಿಎಂಪಿ ಅಥವಾ ಸರಕಾರದ ಮಾಹಿತಿಗಳನ್ನು ಬಿಬಿಎಂಪಿ ಬಿತ್ತರಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಸೇಪಿಯನ್ಸ್ ಸಂಸ್ಥೆಯ ಸುರಜೀತ್ ಬಸು, ರಾಜೇಶ್ ಕೆಂಕೆರೆ, ಸುಶೀಲ್ ಮಹಲ, ಗಿರೀಶ್ ಕುಮಾರ್, ಶಿಲ್ಪಾ ಫೌಂಡೇಶನ್ ಸಂಸ್ಥಾಪಕರಾದ ಅಚ್ಚುತ್ ಗೌಡ ಮುಂತಾದವರು ಉಪಸ್ಥಿತರಿದ್ದರು.