‘ಸಿಎಂ ಬದಲಾವಣೆ ಸನ್ನಿವೇಶ ಬಂದಿಲ್ಲ, ಸಿದ್ದರಾಮಯ್ಯ ರಾಜೀನಾಮೆ ಅಗತ್ಯವೂ ಇಲ್ಲ’

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸನ್ನಿವೇಶ ಬಂದಿಲ್ಲ, ಸಿದ್ದರಾಮಯ್ಯ ರಾಜೀನಾಮೆ ಅಗತ್ಯವೂ ಇಲ್ಲ ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸತೀಶ್ ಜಾರಕಿಹೊಳಿ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಚರ್ಚೆಗಳಾದರೆ ಆದರೆ ಒಳ್ಳೆಯದಲ್ಲವೇ. ಚಾಯ್ ಪೇ ಚರ್ಚೆ ಅಂತ ಕಾರ್ಯಕ್ರಮ ಇದೆಯಲ್ಲ. ಅದೇರೀತಿ ಕಾಫಿ ಪೇ‌ ಚರ್ಚೆ. ನಾವಿಬ್ಬರು ಕುಳಿತುಕೊಂಡು ಎರಡು ಲೋಟ ಕಾಫಿ ಕುಡಿದರೆ ಮುಖ್ಯಮಂತ್ರಿ ಮಾಡಿಬಿಡುತ್ತಾರೆ ಎನ್ನುವುದಾದರೆ ಬಹಳ ಚರ್ಚೆಗಳಾಗುತ್ತಿದ್ದವು. ಬಹಳಷ್ಟು ಕಾಫಿ ಖರ್ಚಾಗುತ್ತಿತ್ತು ಎಂದರು.

ನಾವು ಮಾತನಾಡುವುದರಿಂದ ಏನು ಆಗುವುದಿಲ್ಲ. ನಿರ್ಧಾರ ಎಲ್ಲ ಹೈಕಮಾಂಡ್ ಮಾಡುತ್ತದೆ. ಅಂತಹ ಸನ್ನಿವೇಶ ಈಗ ಬಂದಿಲ್ಲ. ಸನ್ನಿವೇಶ ಬಂದಾಗ ಚರ್ಚೆ ಮಾಡೋಣ, ಅದರ ಬಗ್ಗೆ ಕೂಗು ಹಾಕೋಣ, ಬೇಡಿಕೆ‌ ಇಡೋಣ. ಬೇಕಾದದ್ದು ಮಾಡೋಣ. ಆದರೆ ಈಗ ಸನ್ನಿವೇಶ ಬಂದಿಲ್ಲವಲ್ಲ. ಮುಖ್ಯಮಂತ್ರಿ ರಾಜೀನಾಮೆ ಕೊಡುವ ಅಗತ್ಯವು ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ತನಿಖೆಯ ಶುರುವಿನಿಂದ‌ ತಪ್ಪಿಸಿಕೊಂಡು ತಿರುಗುತ್ತಿದ್ದರು. ಸುಪ್ರೀಂಕೋರ್ಟ್‌ವರೆಗೂ ಹೋಗಿದ್ದರು. ಯಾವುದರಿಂದಲೂ ರಿಲೀಫ್ ಸಿಗಲಿಲ್ಲ‌.‌ ಹೀಗಾಗಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅವರು ತಿಳಿಸಿದರು‌.

ಎರಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಬಹುಮತ ಬರಲಿದೆ ಎಂದು ಎಲ್ಲ ಸಮೀಕ್ಷೆಗಳು ಹೇಳಿವೆ.‌ ದೇಶದಲ್ಲಿ ಬಿಜೆಪಿಯನ್ನು ಯಾವ ರೀತಿ ತಿರಸ್ಕಾರ ಮಾಡುತ್ತಿದ್ದಾರೆ ಅನ್ನುವುದಕ್ಕೆ ಒಂದೊಂದು ರಾಜ್ಯದಲ್ಲಿ ಬದಲಾವಣೆಯಾದಾಗ ಗೊತ್ತಾಗುತ್ತಿದೆ. ಅದೇರೀತಿಯಾಗಿ ಮಹಾರಾಷ್ಟ್ರದಲ್ಲಿ ಕೂಡ ನಮ್ಮ ಪಕ್ಷದ ಸರ್ಕಾರವನ್ನು ರಚಿಸುತ್ತೇವೆ ಎಂಬ ವಿಶ್ವಾಸವಿದೆ. ಬದಲಾವಣೆ ಪ್ರಾರಂಭವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ, ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ್ದೇವೆ‌. ಬಡತನದ ರೇಖೆಗಿಂತ ಕೆಳಗಿರುವವರು ಮೇಲೆ ಬರುಬೇಕು ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಸಾಕಷ್ಟು ನಾಯಕರು ಟೀಕೆ ಮಾಡಿದ್ದಾರೆ. ರಾಜ್ಯದಲ್ಲಿ ಜನತಾದಳದವರು, ಕೇಂದ್ರದಲ್ಲಿ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಜನ ಯಾರನ್ನ ಬೆಂಬಲಿಸುತ್ತಾರೆ ಎಂಬುದು ಈಗ ಅರ್ಥವಾಗುತ್ತಿದೆ‌. ಜನರಿಗೆ ಸಹಾಯವಾಗುವಾಗ ಆ ಪಕ್ಷದ ಜೊತೆ ನಿಲ್ಲುತ್ತಾರೆ‌. ಬಡತನ ರೇಖೆಯಿಂದ ಮೇಲೆ ಬರಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಅಂತ ಎಂದು ಯಾವತ್ತು ಹೇಳಲುಹೋಗಿಲ್ಲ‌. ಗ್ಯಾರಂಟಿ ಯೋಜನೆಗಳನ್ನು ಮತಬ್ಯಾಂಕ್‌ಗೆ ಪರಿವರ್ತಿಸಿಕೊಳ್ಳುತ್ತೇವೆ ಎಂದು ಸಹ ಹೇಳಿಲ್ಲ. ನಾವು ಗ್ಯಾರಂಟಿ ಯೋಜನೆಗಳನ್ನು ಮಾಡಿದರೆ ಒಳ್ಳೆಯದು ಎಂಬುದು ಬಿಜೆಪಿಯವರಿಗೆ ಈಗ ಅರ್ಥವಾಗಿದೆ ಎಂದು ಅವರು ಟೀಕಿಸಿದರು.

Related posts