ಕರ್ನಾಟಕದ ಕೌಶಲ್ಯ ಅಭಿವೃದ್ಧಿ ಮಾದರಿ ಅಳವಡಿಸಿಕೊಳ್ಳಲು ಹಿಮಾಚಲ ಪ್ರದೇಶ ಚಿಂತನೆ

ಬೆಂಗಳೂರು: ಕರ್ನಾಟಕದ ಹಲವು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಇತರೆ ಉಪ್ರಕಮಗಳ ಅನುಷ್ಠಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಿಮಾಚಲ ಪ್ರದೇಶ ಸರ್ಕಾರ ಕರ್ನಾಟಕದ ಮಾದರಿಯನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ.

ಬುಧವಾರ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರೊಂದಿಗೆ ಹಿಮಾಚಲ ಪ್ರದೇಶದ ಪಟ್ಟಣ ಯೋಜನೆ, ವಸತಿ ಮತ್ತು ತಾಂತ್ರಿಕ ಶಿಕ್ಷಣ ಸಚಿವ ರಾಜೇಶ್ ಕುಮಾರ್ ಧರ್ಮಾನಿ ಸಮಾಲೋಚನೆ ನಡೆಸಿದರು.

ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ಕರ್ನಾಟಕದ ಪ್ರಯತ್ನ ಶ್ಲಾಘನೀಯ ಎಂದು ಹಿಮಾಚಲ ಪ್ರದೇಶ ಸಚಿವರು ತಿಳಿಸಿದರು. ತಮ್ಮ ತವರು ರಾಜ್ಯದಲ್ಲಿ ಇದೇ ರೀತಿಯ ಕಾರ್ಯತಂತ್ರಗಳನ್ನು ಜಾರಿಗೆ ತರಲು ತೀವ್ರ ಆಸಕ್ತಿ ಇದೆ ಎಂದು ರಾಜೇಶ್‌ ಕುಮಾರ್‌ ಧರ್ಮಾನಿ ಇಂಗಿತ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಅಧ್ಯಯನ ಮಾಡಲು ಆಗಮಿಸಿರುವ ಧರ್ಮಾನಿ, ಅಂತಾರಾಷ್ಟ್ರೀಯ ವಲಸೆ ಕೇಂದ್ರ (IMC-K) ದಿಂದ ಭಾರಿ ಪ್ರಭಾವಿತರಾದರು. ಯುಎಇ, ವಿವಿಧ ಯುರೋಪಿಯನ್ ರಾಷ್ಟ್ರಗಳು ಮತ್ತು ಜಪಾನ್‌ನಂತಹ ದೇಶಗಳಲ್ಲಿ ಚಾಲಕರು, ದಾದಿಯರು, ಫಿಟ್ಟರ್‌ಗಳು ಮತ್ತು ತಂತ್ರಜ್ಞರಂತಹ ನುರಿತ ಕಾರ್ಮಿಕರ ಉದ್ಯೋಗವನ್ನು ಈ ಕೇಂದ್ರವು ಸುಗಮಗೊಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ ಹಿಮಾಚಲ ಪ್ರದೇಶ ಸಚಿವರು ವಿಶೇಷ ಆಸಕ್ತಿಯಿಂದ ಆಲಿಸಿದರು.

ಉದ್ಯೋಗ ಕೌಶಲ್ಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ಕರ್ನಾಟಕವು ನುರಿತ ಕಾರ್ಮಿಕರನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಯಶಸ್ವಿಯಾಗಿ ಪರಿಚಯಿಸಿದೆ. ಹಿಮಾಚಲ ಪ್ರದೇಶದಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ಕರ್ನಾಟಕವು ತಂತ್ರಜ್ಞಾನದಲ್ಲಿ ಮುಂಚೂಣಿ ನಾಯಕತ್ವವನ್ನು ಹೊಂದಿದೆ ಮತ್ತು ಹಲವಾರು ಐಟಿ ಕಂಪನಿಗಳಿಗೆ ಮೂಲ ಕೇಂದ್ರವಾಗಿದೆ, ಅಮೂಲ್ಯವಾದ ದೀರ್ಘಾವಧಿಯ ಒಳನೋಟ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ”ಎಂದು ಧರ್ಮಾನಿ ಹೇಳಿದರು.

ಹಿಮಾಚಲ ಪ್ರದೇಶ ನಿಯೋಗವನ್ನು ಸ್ವಾಗತಿಸಿದ ಸಚಿವ ಡಾ.ಶರಣ್‌ ಪ್ರಕಾಶ್‌ ಪಾಟೀಲ್, ಹಿಮಾಚಲ ಪ್ರದೇಶದ ಅಭಿವೃದ್ಧಿಗೆ ಬೆಂಬಲ ನೀಡಲು ಜ್ಞಾನ ಮತ್ತು ಕೌಶಲ್ಯ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಂಚಿಕೊಳ್ಳಲು ಕರ್ನಾಟಕ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ (ಕೆಎಸ್‌ಡಿಸಿ) ಅಧ್ಯಕ್ಷ ಕಾಂತ ನಾಯ್ಕ್, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌ಇ ಸುಧೀಂದ್ರ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related posts