ಮತ್ತಷ್ಟು ಸಾಲದ ಅನಿವಾರ್ಯತೆ ಸೃಷ್ಟಿಯಾಗಿದ್ದೇ ಬಿಜೆಪಿಯಿಂದ; ಅಂಕಿ ಅಂಶಗಳೊಂದಿಗೆ ಚಾಟಿ ಬೀಸಿದ ರಾಮಲಿಂಗ ರೆಡ್ಡಿ

ಬೆಂಗಳೂರು: ಸಾರಿಗೆ ಸಂಸ್ಥೆಗಳು ಲೋನ್ ತೆಗೆದುಕೊಳ್ಳಬೇಕು. ಯಾಕೆಂದರೆ, ತಮ್ಮ ಪಕ್ಷದ ದುರಾಡಳಿತದ ಅವಧಿಯಲ್ಲಿನ ರೂ.5900 ಕೋಟಿ ಸಾಲ‌ ತೀರಿಸಬೇಕಾದ ಅನಿವಾರ್ಯತೆ ಇದೆಯಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಪಕ್ಷ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿ.ಜೆ.ಪಿ ಎಂದರೆ ಬುರುಡೆ‌ ಜನರ ಪಕ್ಷ, ಅವರಿಗೆ ಬುರುಡೆಯಲ್ಲಿ ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ. ಬುರುಡೆ ಜನರೆಲ್ಲ ಕೂಡಿಕೊಂಡು ಪುಖಾಂನುಪುಂಖವಾಗಿ ಸುಳ್ಳನ್ನೇ ಸತ್ಯವೆಂದು ಬುರುಡೆ‌ ಪಕ್ಷ ಬಿಂಬಿಸುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಾರಿಗೆ ಸಂಸ್ಥೆಗಳ ಆದಾಯ ವೃದ್ದಿಯಾಗಿದೆ ಎಂದೇ ನಾವು ಪದೇ ಪದೇ ಹೇಳುತ್ತಿರುವುದು. ಲಾಭ ಆಗಿದೆ ಎಂದು ನಾವು ಎಲ್ಲೂ ಹೇಳಿಲ್ಲ. ಆದಾಯ ಮತ್ತು ಲಾಭಕ್ಕೆ ವ್ಯತ್ಯಾಸ ತಿಳಿಯದ, ಸಾಮಾನ್ಯ ಗಣಿತವು ಬಾರದ ಅಜ್ಞಾನಿಗಳು ಬಿ.ಜೆ.ಪಿಯವರು ಎಂದು ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಆಡಳಿತದಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಮಾಡಿದ ಸಾಲ ರೂ 2 ಲಕ್ಷ ಕೋಟಿ. ಅದರ ಬಗ್ಗೆ ಸ್ವಲ್ಪ ಗಮನಹರಿಸಿ ವಿಷಯ ಸಂಗ್ರಹಿಸಿ ಮಾತನಾಡಿ ಎಂದು ಬಿಜೆಪಿ ನಾಯಕರ ಟೀಕೆಗೆ ಎದಿರೇಟು ನೀಡಿರುವ ರಾಮಲಿಂಗ ರೆಡ್ಡಿ, 1947 ರಿಂದ 2014 ರವರೆಗೆ ದೇಶದ‌ 67 ವರ್ಷಗಳ ಇತಿಹಾಸದಲ್ಲಿ ಎಲ್ಲಾ ಪ್ರಧಾನಮಂತ್ರಿಗಳು ಮಾಡಿದ ಸಾಲ ರೂ. 53 ಲಕ್ಷ ಕೋಟಿಗಳು. ಆದರೆ, ಇಂದಿನ ಕೇಂದ್ರ ಸರ್ಕಾರ ಮಾಡಿರುವ ಸಾಲ 2014-2025 ರ ಅವಧಿಗೆ ರೂ 149 ಲಕ್ಷ ಕೋಟಿಗಳು. ಇಲ್ಲಿಯವರೆಗೆ ಒಟ್ಟು ಸಾಲ ಇರುವುದು ರೂ 202 ಲಕ್ಷ ಕೋಟಿ. ಅಂದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಸಾಲ‌ ಮಾಡಿದ ಕೀರ್ತಿ ಬಿ.ಜೆ.ಪಿ ಪಕ್ಷಕ್ಕೆ ಸಲ್ಲಬೇಕು ಎಂದು ವಿಶ್ಲೇಷಣೆ ಮಾಡಿದ್ದಾರೆ.

ದೇಶದ ಜನರಿಗೆ ಸುಳ್ಳು ಅಂಕಿ ಅಂಶಗಳನ್ನು ನೀಡಿ, ದಾರಿ ತಪ್ಪಿಸುತ್ತಾ, ಜನರ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ನೀಡದಿರುವುದು ದುರಂತವೇ ಸರಿ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.

Related posts