ಕನ್ನಡಿಗರ ಮೇಲಿನ ದಾಳಿ ಖಂಡಿಸಿ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಕರೆ

ಬೆಂಗಳೂರು: ಕನ್ನಡಿಗರ ಮೇಲೆ ಮರಾಠಿಗರು ನಡರಸಿರುವ ದೌರ್ಜನ್ಯ ಖಂಡಿಸಿ ಕನ್ನಡ ಪರ ಸಂಘನೆಗಳು ಸರಣಿ ಪ್ರತಿಭಟನೆ ಹಾಗೂ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಹಾಗೂ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಗಳ ಮೇಲಿನ ಮರಾಠಿಗರ ದಾಳಿ ಖಂಡಿಸಿ ಶುಕ್ರವಾರ ಸರಣಿ ಪ್ರತಿಭಟನೆಗಳನ್ನು ನಡೆಸಲಾಗುವುದು ಹಾಗೂ ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ ಆಚರಿಸಲಾಗುವುದು ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಶುಕ್ರವಾರ ಕನ್ನಡ ಪರ ಸಂಘಟನೆಗಳ ಸಭೆ ನಡೆಯಿತು. ಈ ಸಭೆಯಲ್ಲಿ ಸರಣಿ ಹೋರಾಟ ಹಾಗೂ ಕರ್ನಾಟಕ ಬಂದ್ ಆಚರಿಸಲು ನಿರ್ಧರಿಸಲಾಯಿತು. ಈ ಬಗ್ಗೆ ಸುದ್ದಿಗಾರರಿಗೆ ವಿವರ ಒದಗಿಸಿದ ವಾಟಾಳ್ ನಾಗರಾಜ್,
ಶುಕ್ರವಾರ ಸರಣಿ ಪ್ರತಿಭಟನೆಗಳನ್ನು ನಡೆಸಲಾಗುವುದು, ಮಾರ್ಚ್ 3 ರಂದು ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಹಾಗೂ ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ ಆಚರಿಸಲಾಗುವುದು ಎಂದು ತಿಳಿಸಿದರು.

ಈ ನಡುವೆ, ಮಾರ್ಚ್ 7 ರಂದು ಬೆಳಗಾವಿ ಚಲೋಗೆ ಕರೆ ನೀಡಲಾಗಿದ್ದು, ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದ ಅವರು, ಮಾರ್ಚ್ 11 ರಂದು ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಅತ್ತಿಬೆಲೆ ಬಳಿ ತಮಿಳುನಾಡು ಗಡಿ ಬಂದ್ ಮಾಡಲಾಗುವುದು. ಮಾರ್ಚ್14ರಂದು ರಾಮನಗರ ಮಂಡ್ಯ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು, ಮಾ.17 ರಂದು ಹೊಸಕೋಟೆ – ಚೆನ್ನೈ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ತಿಳಿಸಿದರು.

Related posts