ಆಶಾ ಕಾರ್ಯಕರ್ತೆಯರ ಬೇಡಿಕೆ ವಿಚಾರದಲ್ಲಿ ನುಡಿದಂತೆ ನಡೆಯದ ಸಿಎಂ: ಗೌರವ ಧನ ಹೆಚ್ಚಿಸಲು ಆಗ್ರಹ

ಬೆಂಗಳೂರು: ಅರೋಗ್ಯ ಕ್ಷೇತ್ರದಲ್ಲಿ ಅವಿರತ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತೆ ಹೋರಾಟಕ್ಕೆ ತಯಾರಿ ನಡೆಸಿದ್ದಾರೆ. ಬೇಡಿಕೆ ಈಡೇರಿಸುವ ಸಂಬಂಧ ಮುಖ್ಯಮಂತ್ರಿಯವರು ನುಡಿದಂತೆ ನಡೆಯಬೇಕೆಂದು ಆಗ್ರಹಿಸಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಆಯವ್ಯಯದಲ್ಲಿ ರಾಜ್ಯದ ಸುಮಾರು 2.5 ಲಕ್ಷ ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ 1000 ರೂಪಾಯಿ ಹೆಚ್ಚಿಸಿದಂತೆ 42, ಸಾವಿರ ಆಶಾ ಕಾರ್ಯಕರ್ತೆಯರಿಗೂ 1000 ರೂಪಾಯಿ ಹೆಚ್ಚಿಸಿ, ಇದೇ ಬಜೆಟ್‌ನಲ್ಲಿ ಸೇರಿಸಿ ಆದೇಶಿಸಬೇಕು ಎಂದು ಒತ್ತಾಯಿಸಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಹಾಗೂ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಅವರು ಸರ್ಕಾರದ ಮುಂದಿಟ್ಟಿರುವ ಬೇಡಿಕೆ ಗಮನಸೆಳೆದಿದೆ. ಮುಖ್ಯ ಮಂತ್ರಿ ಘೋಷಿಸಿರುವಂತೆ ಎಪ್ರಿಲ್ 2025ರಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ಮಾಸಿಕ 10,000 ರೂಪಾಯಿ ಗೌರವಧನ ಮತ್ತು ಈ ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾದ 1,000 ರೂ.ಪಾಯಿ ಹೆಚ್ಚಳ ಸೇರಿಸಿ ಅಧಿಕೃತ ಆದೇಶ ಮಾಡಬೇಕೆಂದು ಒತ್ತಾಯಿಸಿ ಹಾಗೂ ‘ನುಡಿದಂತೆ ನಡೆಯುವಂತೆ ಸರ್ಕಾರಕ್ಕೆ ಆಶಾ ಸಂಘದ ಪರವಾಗಿ ಈ ಮುಖಂಡರು ಆಗ್ರಹಿಸಿದ್ದಾರೆ.

ಕಳೆದ 2025 ಜನವರಿ 7 ರಿಂದ 10 ನೇ ತಾರೀಖಿನವರೆಗೆ ರಾಜ್ಯದ ಆಶಾ ಕಾರ್ಯಕರ್ತೆಯರ ಅಹೋರಾತ್ರಿಯ ಹೋರಾಟ ನಡೆದಿರುತ್ತದೆ. 2025 ರ ಜನವರಿ 10 ರಂದು ಮುಖ್ಯ ಮಂತ್ರಿಗಳು ಹೋರಾಟ ನಿರತ ಆಶಾ ಸಂಘದ ಪದಾಧಿಕಾರಿಗಳನ್ನು ಕರೆದು ಬೇಡಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿರುತ್ತಾರೆ. ಮುಖ್ಯ ಮಂತ್ರಿಗಳು, ಆರೋಗ್ಯ ಸಚಿವರು ಮತ್ತು ಹಿರಿಯ ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡು, ಮುಖ್ಯ ಮಂತ್ರಿಗಳ ಪರವಾಗಿ ಆರೋಗ್ಯ ಇಲಾಖೆ ಆಯುಕ್ತರು ಪ್ರತಿಭಟನಾ ಸ್ಥಳ ಫ್ರೀಡಂ ಪಾರ್ಕ್‌ಗೆ ಆಗಮಿಸಿ ಸುಮಾರು 20000 ಆಶಾ ಕಾರ್ಯಕರ್ತೆಯರ ಹಾಗೂ ಮಾಧ್ಯಮಗಳ ಮುಂದೆ ಘೋಷಿಸಿದ್ದಾರೆ. ಮುಖ್ಯ ಮಂತ್ರಿ ಕೂಡಾ ನಮ್ಮ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮಾಧ್ಯಮಗಳ ಮುಂದೆ ಪ್ರಕಟಿಸಿದ್ದಾರೆ. ಆದರೆ ನುಡಿದಂತೆ ನಡೆದಿಲ್ಲ ಎಂದು ಈ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ರೂ.10000 ಗಳ ಗೌರವಧನವನ್ನು ನೀಡಲಾಗುವುದು. ರೂ.10,000 ಹೊರತುಪಡಿಸಿ, ಕಾಂಪೋನೆಂಟ್ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್‌ ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ.10,000 ಗ್ಯಾರಂಟಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು ಎಂದು ಈ ನಾಯಕರು ಗಮನಸೆಳೆದಿದ್ದಾರೆ.

ಬಜೆಟ್ ನಂತರ ಆರೋಗ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸಂಘದಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಮಾಸಿಕ ಕನಿಷ್ಟ ರೂ. 10000 ಗಳ ಗೌರವಧನವನ್ನು ನೀಡಲಾಗುವ ಕುರಿತು ಸ್ಪಷ್ಟಿಕರಣ ಕೇಳಿರುತ್ತೇವೆ. ಆದರೆ ಅವರಿಂದ ಈ ಕುರಿತು ಉತ್ತರ ದೊರೆತಿಲ್ಲ. 2 ತಿಂಗಳು ಕಳೆದರೂ ಈ ಬಗ್ಗೆ ಆದೇಶವಾಗಿರುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯ ಮಂತ್ರಿಗಳು ಭರವಸೆ ನೀಡಿದಂತೆ ಇದೇ ಆಯವ್ಯಯ ಪೂರ್ವಭಾವಿ ಸಭೆಯನ್ನು ಸಂಘದೊಂದಿಗೆ ನಡೆಸಿಲ್ಲ. ಈ ಆಯವ್ಯಯದಲ್ಲಿ ರಾಜ್ಯದ ಸುಮಾರು 2,50,000 ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ ರೂ. 1000 ಹೆಚ್ಚಿಸಿದಂತೆ 42000 ಆಶಾ ಕಾರ್ಯಕರ್ತೆಯರಿಗೂ ರೂ. 1000 ಹೆಚ್ಚಿಸಿ, ಇದೇ ಬಜೆಟ್‌ನಲ್ಲಿ ಸೇರಿಸಿ, ಆದೇಶಿಸಬೇಕಾಗಿದೆ ಎಂದು ಪಟ್ಟು ಹಿಡಿದಿದ್ದಾರೆ.

ಆಶಾಗಳಿಗೆ ಈ ಬಜೆಟ್‌ನಲ್ಲಿ ತಂಡ ಆಧಾರಿತ ರೂ. 1000 ಹೆಚ್ಚಳ ಎಂದು ಕೇವಲ ಸುಮಾರು 22000 ಆಶಾಗಳಿಗೆ ರೂ.10000 ನೀಡಲು ಬೇಕಿದ್ದ ಹೆಚ್ಚುವರಿ ಬಜೆಟ್ ನೀಡಿರುತ್ತಾರೆ. ಈ ತಂಡ ಆಧಾರಿತ ಹಣ ಈಗಾಗಲೇ ಸುಮಾರು 20000 ಆಶಾಗಳಿಗೆ ಇತ್ತು. ಇನ್ನುಳಿದ 22000 ಆಶಾಗಳಿಗೆ ಅಗತ್ಯ ಇದ್ದ ಹಣ ಬಜೆಟ್’ನಲ್ಲಿ ಘೋಷಿಸಿರುವರು. ಹೋರಾಟ ನಿರತ ಆಶಾಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿತೆಂದು ರಾಜ್ಯ ವ್ಯಾಪಿ ಕಾರ್ಯಕರ್ತೆಯರು ಅತ್ಯಂತ ಖುಷಿಯಿಂದ ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಇದೇ ಎಪ್ರಿಲ್ ನಿಂದ ಜಾರಿಯಾಗಲಿದೆ ಎಂದು 2 ತಿಂಗಳಿಂದ ಆದೇಶದ ನಿರೀಕ್ಷೆಯಲ್ಲಿ ಇದ್ದರು. ಆರೋಗ್ಯ ಸಚಿವರ ಧೋರಣೆಯು ನುಡಿದಂತೆ ನಡೆಯುವ ನಡೆ ಕಾಣಿಸುತ್ತಿಲ್ಲ. ಎಲ್ಲಾ ಆಶಾಗಳಿಗೆ ಇದು ಬಹು ದೊಡ್ಡ ಆಘಾತವಾಗಿದೆ ಎಂದು ಕೆ.ಸೋಮಶೇಖರ್ ಯಾದಗಿರಿ ಹಾಗೂ ಡಿ.ನಾಗಲಕ್ಷ್ಮೀ ಅವರು ಮಾಧ್ಯಮ ಹೇಳಿಕೆಯಲ್ಲಿ ದೂರಿದ್ದಾರೆ.

ಯಾವುದೇ ಭರವಸೆ ಈಡೇರಿಸಿಲ್ಲ, ಬದಲಿಗೆ ಆರೋಗ್ಯ ಇಲಾಖೆಯಿಂದ ಒಂದಾದ ಮೇಲೆ ಒಂದರಂತೆ ಆಶಾ ಕಾರ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಲ್ಲೇ 20 ಆಶಾಗಳಿಗೆ ಒಬ್ಬರಂತೆ ಆಶಾ ಸುಗಮಕಾರರನ್ನು ನೇಮಿಸಿಕೊಂಡು ಕಳೆದ 12 ವರ್ಷಗಳಿಂದ ಇವರಿಂದ ಮಾಸಿಕ ಕೇವಲ ರೂ. 6000 ನೀಡಿ ಕೆಲಸ ತೆಗೆದುಕೊಂಡಿದ್ದಾರೆ. ಏಕಾಏಕಿಯಾಗಿ ಆಶಾ ಸುಗಮಕಾರರನ್ನು ಕೆಲಸದಿಂದ ಕೊನೆಗೊಳಿಸಿ ಆದೇಶ ಹೊರಡಿಸಲಾಗಿದೆ. ಇದು ನಿಜಕ್ಕೂ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಈ ಹಿಂದೆ ಹಿರಿಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ಬಂದಾಗ ಇವರಿಗೆ ಆಶಾ/ ಸುಗಮಕಾರರಿಗೆ ಹೆಚ್ಚಿನ ಗೌರವ ನೀಡಿ ಕೆಲಸದಲ್ಲಿ ಎರಡರಲ್ಲಿ ಒಂದು ಆಯ್ಕೆ ಮಾಡಿಕೊಳ್ಳುವ ಪ್ರಸ್ತಾಪ ಮಾಡಿದ್ದರು. ಆದರೆ ಈಗ ದಿಢೀರನೆ ಕೆಲಸದಿಂದ ಬಿಡುಗಡೆಗೊಳಿಸಿರುವುದು ಅನ್ಯಾಯ. ಹಿಂದಿನ ಚರ್ಚೆಯಂತೆ ಹೆಚ್ಚಿನ ಗೌರವಧನ ನೀಡಿ, ದಿನ-ಪ್ರಯಾಣ ಭತ್ಯೆ ನೀಡಿ ಇವರಿಗೆ ಆಯ್ಕೆ ಮಾಡಿಕೊಂಡು ಕೆಲಸ ಮಾಡಲು ಅವಕಾಶ ನೀಡಬೇಕು. ಈ ಕುರಿತು ಮರು ಆದೇಶ ಮಾಡಬೇಕು ಎಂದು ಕೆ.ಸೋಮಶೇಖರ್ ಯಾದಗಿರಿ ಹಾಗೂ ಡಿ.ನಾಗಲಕ್ಷ್ಮೀ ಆಗ್ರಹಿಸಿದ್ದಾರೆ.

60 ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಕೊನೆಗೊಳಿಸಿರುವುದಾಗಿ ಆದೇಶಿಸಲಾಗಿದೆ. ಕಳೆದ 16 ವರ್ಷಗಳಿಂದ ಆಶಾ ಕೆಲಸ ಮಾಡುತ್ತಿರುವವರನ್ನು ದಿಢೀರನೆ ಬೀದಿಗೆ ತಳ್ಳಿದ್ದಾರೆ. ಇದು ಅತ್ಯಂತ ಅಮಾನವೀಯ ನಡೆಯಾಗಿದೆ. ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲೂ ನಿವೃತ್ತಿ ವಯಸ್ಸನ್ನು 62 ಕ್ಕೆ ಹೆಚ್ಚಿಸಿ, ನಿವೃತ್ತಿ ಸೌಕರ್ಯಗಳನ್ನು ಜಾರಿ ಮಾಡಬೇಕು. ಈ ಸಂಬಂಧ ಮರು ಆದೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Related posts