ಬೆಂಗಳೂರು: ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿಚಾರದಲ್ಲಿ ಮಿತ್ರ ಪಕ್ಷ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲು ಜೆಡಿಎಸ್ ನಿರ್ಧರಿಸಿದೆ.
ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿರುದ್ಧದ ಬಿಜೆಪಿ ಹೋರಾಟದಲ್ಲಿ ಕೈಜೋಡಿಸುವುದಿಲ್ಲ ಎಂದು ಜೆಡಿಎಸ್ ನಾಯಕರು ತಿಳಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ನಾಯಕರ ಸಭೆಯಲ್ಲಿ ಗಹನವಾದ ಚರ್ಚೆ ನಡೆದಿದೆ. ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿರೋಧಿಸಿ ಬಿಜೆಪಿ ನಡೆಸುವ ಹೋರಾಟದಲ್ಲಿ ಭಾಗವಹಿಸಬಾರದೆಂಬ ಅಭಿಪ್ರಾಯ ಜೆಡಿಎಸ್ ನಾಯಕರಿಂದ ವ್ಯಕ್ತವಾಗಿದೆ ಎನ್ನಲಾಗಿದೆ.
ಬಿಜೆಪಿ ಜೊತೆಗೆ ರಾಜಕೀಯ ಮೈತ್ರಿ ಮಾಡಿಕೊಂಡರೂ ಸಿದ್ಧಾಂತ ಮತ್ತು ತತ್ವಗಳಲ್ಲಿ ತಮ್ಮ ಪಕ್ಷ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಂದೇಶ ಸಾರಿರುವ ಜೆಡಿಎಸ್ ನಾಯಕರು, ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿಚಾರವು ಸೈದ್ದಂತಿಕ ಹೋರಾಟವಾಗಿದ್ದು ಅದರಿಂದ ದೂರ ಉಳಿಯುವ ಬಗ್ಗೆ ಅನೇಕರು ಅಭಿಪ್ರಾಯ ಮಂಡಿಸಿದ್ದಾರೆ ಎನ್ನಲಾಗಿದೆ. ಬೆಲೆ ಏರಿಕೆ, ದುರಾಡಳಿತ, ಭ್ರಷ್ಟಾಚಾರ ಇತ್ಯಾದಿಗಳ ವಿರುದ್ಧದ ಹೋರಾಟದಲ್ಲಿ ಬಿಜೆಪಿಯನ್ನು ಬೆಂಬಲಿಸೋನಾ. ಆದರೆ ಜಾತಿ ಆಧಾರದಲ್ಲಿ ನಡೆಯುವ ಹೋರಾಟದಿಂದ ದೂರ ಉಳಿಯೋಣ ಎಂಬ ಹಲವರ ಅಭಿಪ್ರಾಯಕ್ಕೆ ನಾಯಕರು ಸಮ್ಮತಿಸಿದ್ದಾರೆ ಎನ್ನಲಾಗಿದೆ.