ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಕೈಗೊಂಡಿರುವ ಬಿಜೆಪಿ ನಾಯಕರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಶಾಕ್ ನೀಡಿದೆ. ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧದ ಶೇ. 40 ರಷ್ಟು ಕಮಿಷನ್ ಆರೋಪಗಳ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ತನಿಖಾ ವರದಿ ಆಧರಿಸಿ ಹೆಚ್ಚಿನ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಾ ತೀರ್ಮಾನಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಬಿಜೆಪಿ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪದ ತನಿಖೆಗೆ ರಚನೆಯಾಗಿದ್ದ ನ್ಯಾ. ನಾಗಮೋಹನ್ ದಾಸ್ ವಿಚಾರಣಾ ಆಯೋಗ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು ಎಂದು ತಿಳಿಸಿದರು.
ಸಂಪುಟ ಸಭೆಯು ವಿಚಾರಣಾ ಆಯೋಗದ ವರದಿ ಆಧಾರದಲ್ಲಿ ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲು ನಿರ್ಧಾರ ಮಾಡಿದೆ. ಎಸ್‌ಐಟಿ ಎರಡು ತಿಂಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.