ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರಿಷತ್ ಸಭಾಪತಿಗೆ ದೂರು ಸಲ್ಲಿಸಿದ್ದು, ಈ ಸಂಬಂಧ ಶಾಸಕ ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
“ನಾನು ಯಾವುದೇ ಅವಹೇಳನಕಾರಿ ಭಾಷಣ ಮಾಡಿಲ್ಲ. ಜೂನ್ 30ರಂದು ನಡೆದ ಪ್ರತಿಭಟನೆ ವೇಳೆ ಸಿಎಸ್ ಬಗ್ಗೆ ಮಾತನಾಡಿಲ್ಲ. ಅವರು ಬ್ಯುಸಿಯಾಗಿರುವುದರಿಂದ ಭೇಟಿಯಾಗಲಾಗಿಲ್ಲ ಎಂದು ಮಾತ್ರ ಹೇಳಿದ್ದೆ. ಇದರ ಹೊರತಾಗಿ ಅವರಿಗೆ ನೇರವಾಗಿ ಕುರಿತು ಯಾವುದೇ ಅವಮಾನಕಾರಿ ಮಾತುಗಳನ್ನಾಡಿಲ್ಲ” ಎಂದು ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿರುವ ರವಿಕುಮಾರ್, ಈ ಕುರಿತು ಹರಡುತ್ತಿರುವ ಸುದ್ದಿಗಳು ದಾರಿತಪ್ಪಿಸುವ ಹಾಗೂ ದುರುದ್ದೇಶಪೂರಿತವಾಗಿವೆ ಎಂದು ಆರೋಪಿಸಿದ್ದಾರೆ.
‘ಸಿಎಂ ಭೇಟಿಗೆ ಲಭ್ಯರಾಗುತ್ತಿಲ್ಲ, ಸಿಎಸ್ ಸಿಗುತ್ತಿಲ್ಲ ಎಂದಷ್ಟೆ. ಆದರೆ, ಈ ಮಾತುಗಳನ್ನು ಅವಹೇಳನವೆಂದು ವಿವರಿಸಲಾಗುತ್ತಿದೆ. ನನ್ನ ನಿಖರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ’ ಎಂದು ರವಿಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ತಮ್ಮ ವಿರುದ್ದದ ಈ ರೀತಿಯ ಆರೋಪಗಳನ್ನು ಸಂಪೂರ್ಣ ನಿರಾಕರಿಸುತ್ತಿದ್ದು, ಈ ರೀತಿಯ ಆರೋಪಗಳು ಮಾನಹಾನಿಕಾರಕ ಎಂದವರು ಪ್ರತಿಪಾದಿಸಿದ್ದಾರೆ.