ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ‘ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಹೆಸರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ‘ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ’ ಎಂದು ಮರು ನಾಮಕರಣ ಮಾಡಲು ಸರ್ಕಾರ ತೀರ್ಮಾನಿಸಿದೆ.

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ ( SLN ಚಾರಿಟಿ) ಯನ್ನು ಶ್ರೀ ದೊಡ್ಡಣ್ಣಶೆಟ್ಟರು 1906 ರಲ್ಲಿಯೇ ಸ್ಥಾಪಿಸಿ. ಸಮಾಜದಲ್ಲಿನ ಬಡವರು, ಹಿಂದುಳಿದವರು ಎಂಬ ಭೇದಭಾವವಿಲ್ಲದೇ ಸರ್ವ ಜನಾಂಗಕ್ಕೂ ಸಮಾನ ಶಿಕ್ಷಣವನ್ನು ನೀಡಬೇಕೆಂಬ ದೂರದೃಷ್ಟಿಯನ್ನು ಇಟ್ಟುಕೊಂಡು, ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಶ್ರೀ ದೊಡ್ಡಣ್ಣ ಶೆಟ್ಟರ ಸೇವೆಯನ್ನು ಗುರುತಿಸಿ, ಅಂದಿನ ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ರಾಜರ ದರ್ಭಾರಿಗೆ ಆಹ್ವಾನಿಸಿ ‘ಜನೋಪಕಾರಿ’ ಎಂಬ ಬಿರುದನ್ನು ಹಾಗೂ ಪದಕವನ್ನು ನೀಡಿ ಸನ್ಮಾನಿಸಿದ್ದರು.

ದೊಡ್ಡಣ್ಣ ಶೆಟ್ಟರು‌ ತಮ್ಮ 5 ಎಕರೆ ಭೂಮಿಯನ್ನು ಉಚಿತವಾಗಿ ಕಲಾಸಿಪಾಳ್ಯದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನೀಡಿದ ಮಹಾದಾನಿ. ದೊಡ್ಡಣ್ಣ ಶೆಟ್ಟರು ಸ್ಥಾಪಿಸಿರುವ ಈ ಸಂಸ್ಥೆಯ ಕಾರ್ಯಕ್ರಮಗಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ರಾಷ್ಟ್ರಗೀತೆಯನ್ನು ರಚಿಸಿದ ರವೀಂದ್ರನಾಥ ಠಾಗೋರ್ ಮತ್ತು ಡಾ.ಅನಿಬೆಸೆಂಟ್ ಮೊದಲಾದವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿರುವುದೂ ಇತಿಹಾಸ.

ಬೆಂಗಳೂರು ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ‘ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ’ ಎಂದು ಮರು ನಾಮಕರಣ ಮಾಡುವ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚಿಗೆ ತೀರ್ಮಾನಿಸಲಾಗಿದ್ದು, ಸರ್ಕಾರದ ಈ ನಡೆಯನ್ನು ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ ಸಮಸ್ತ ಗಾಣಿಗ ಸಮುದಾಯ ಸ್ವಾಗತಿಸಿದೆ. ಇದೊಂದು ಐತಿಹಾಸಿಕ ತೀರ್ಮಾನವೆಂದೇ ಪರಿಗಣಿಸಲಾಗಿದೆ ಎಂದು ಸಮುದಾಯದ ಮುಖಂಡರು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ (SLN ಚಾರಿಟಿ) ಕೋಟೆ ರವರ ವತಿಯಿಂದ ಸುದರ್ಶನ್, ಮಾಜಿ ಸಚೇತಕರು ಹಾಗೂ ಅಧ್ಯಕ್ಷರು ಚಿತ್ರಕಲಾ ಪರಿಷತ್, ಸುರೇಶ್ ಅಧ್ಯಕ್ಷರು, ಲಕ್ಷ್ಮಿ ಸುರೇಶ್ ಕಾರ್ಯದರ್ಶಿ ನಾಗರಾಜ್ ಅವರನ್ನೊಳಗೊಂಡ ಗಣ್ಯರು ಸಿಎಂ ಹಾಗೂ ಸಾಯರಿಗೆ ಸಚಿವರನ್ನು ಭೇಟಿ ಮಾಡಿ ಸರ್ಕಾರದ ನಿರ್ಧಾರವನ್ನು ಅಭಿನಂಧಿಸಿದ್ದಾರೆ.

Related posts