ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆಯೇ ಮಹಿಳೆಗೆ ಹೆರಿಗೆ: ಸೇನಾ ವೈದ್ಯನ ಸಮಯಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ

ಝಾನ್ಸಿ (ಉತ್ತರ ಪ್ರದೇಶ): ಪ್ರಯಾಣದ ಮಧ್ಯೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ, ಭಾರತೀಯ ಸೇನೆಯ ವೈದ್ಯಾಧಿಕಾರಿಯೊಬ್ಬರು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ ಮೇಲೆಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ.

ಶನಿವಾರ ಮಧ್ಯಾಹ್ನ ಪನವೇಲ್‌–ಗೋರಖಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಝಾನ್ಸಿ ರೈಲು ನಿಲ್ದಾಣದಲ್ಲಿ ಇಳಿದರು. ತೀವ್ರ ನೋವಿನಿಂದ ಮಹಿಳೆಯ ಕಿರುಚಾಡುತ್ತಿದುದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಕೂಡಲೇ ಸೇನಾ ವೈದ್ಯರನ್ನು ಸಂಪರ್ಕಿಸಿದರು. ಅದಾಗಲೇ, ಅಲ್ಲೇ ಇದ್ದ ಭಾರತೀಯ ಸೇನೆಯ ಮೇಜರ್‌ ಡಾ. ರೋಹಿತ್‌ ಬಚ್‌ವಾಲಾ (31) ಅವರು ಕೂಡಲೇ ಮಹಿಳೆಯ ನೆರವಿಗೆ ಧಾವಿಸಿದರು. ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಪ್ರಕ್ರಿಯೆ ನಡೆಸಿದರು. ವೈದ್ಯರ ಸಮಯ ಪ್ರಜ್ಞೆಯಿಂದಾಗಿ ತಾಯಿ ಮತ್ತು ಮಗು ಇಬ್ಬರೂ ಕೂಡ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ತುರ್ತು ವೈದ್ಯಸೇವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈದ್ಯ ಡಾ. ರೋಹಿತ್‌ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

Related posts