ಬೆಂಗಳೂರು: ಬಿಜೆಪಿ-ಜೆಡಿಎಸ್ ಬೆಂಗಳೂರಿನ ಪರಿಸರ ಹಾಗೂ ಜೀವ ಪರಿಸರವನ್ನು ಹೇಗೆ ನಾಶಪಡಿಸುತ್ತಿದೆ ಎಂಬುದರ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾಡಿರುವ ಟ್ವೀಟ್ ಗಮನಸೆಳೆದಿದೆ.
ಹವಾನಿಯಂತ್ರಿತ ನಗರ, ಉದ್ಯಾನನಗರ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು “ಕಾಂಕ್ರೀಟ್ ಶಾಖದ ಸುಳಿಗೆ” ಸಿಲುಕುತ್ತಿದೆ. ಇದರ ನಡುವೆಯೇ ನಾನು ಕರ್ನಾಟಕ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ನಡೆಸಿದ ಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರ ಹಾಗೂ ಬಿಜೆಪಿ-ಜೆಡಿಎಸ್ ಬೆಂಗಳೂರಿನ ಪರಿಸರ ಹಾಗೂ ಜೀವ ಪರಿಸರವನ್ನು ಹೇಗೆ ನಾಶಪಡಿಸುತ್ತಿದೆ ಎಂಬ ಬಗ್ಗೆ ಆಘಾತಕಾರಿ ವಿಷಯಗಳು ಹೊರಬಂದಿವೆ ಎಂದವರು ಬೆಳಕುಚೆಲ್ಲಿದ್ದಾರೆ.
1960 ರ ದಶಕದಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿನ ಹೃದಯಭಾಗದಲ್ಲಿರುವ ಗೋರಗುಂಟೆ ಪಾಳ್ಯದ ಬಳಿ ಕಾರ್ಖಾನೆಗಾಗಿ ಎಚ್.ಎಂ.ಟಿ ಸಂಸ್ಥೆಗೆ 443 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಕಾರ್ಖಾನೆ ಕಳೆದ 15 ವರ್ಷಗಳಿಂದಲೂ ಸ್ಥಗಿತಗೊಂಡಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
ಈ ಜಮೀನಿನಲ್ಲಿ ಅವರು 160 ಎಕರೆಯನ್ನು ಈಗಾಗಲೇ ಮಾರಾಟ ಮಾಡಿದ್ದಾರೆ. ಉಳಿದ 280 ಎಕರೆ ಜಾಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯು ಕಬ್ಬನ್ ಪಾರ್ಕ್ ನಂತೆ ‘ ಜೀವ ವೈವಿಧ್ಯತೆ ಉದ್ಯಾನವನ’ ನಿರ್ಮಿಸಲು ಉದ್ದೇಶಿಸಿದೆ. ಇದು ಬೆಂಗಳೂರು ನಾಗರೀಕರ ಉಸಿರಾಟದ ಆರೋಗ್ಯ ಕಾಪಾಡುವ ಎರಡನೇ ಶ್ವಾಸಕೋಶ ದಂತೆ ನೆರವಾಗುತ್ತಿತ್ತು ಎಂದವರು ಪ್ರತಿಪಾದಿಸಿದ್ದಾರೆ.
ಆದರೆ ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿಯ ಮೋದಿ ಸರ್ಕಾರ ಮತ್ತು ಎಚ್.ಡಿ ಕುಮಾರಸ್ವಾಮಿ ಅವರು 280 ಎಕರೆ ಭೂಮಿಯನ್ನು “ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ” ಮಾರಾಟ ಮಾಡಲು ಮುಂದಾಗಿರುವುದು ದುರಾದೃಷ್ಟಕರ. ಈ ಜಮೀನಿಗಾಗಿ ಕರ್ನಾಟಕ ಸರ್ಕಾರ ಮತ್ತು ಕೇಂದ್ರದ ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತಿದ್ದು, ಪ್ರಕರಣ ಜುಲೈ 27ಕ್ಕೆ ವಿಚಾರಣೆಗೆ ಬರಲಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಭೂಮಿಯಲ್ಲಿ ಕಬ್ಬನ್ ಪಾರ್ಕ್‌ನಂತಹ ಜೈವಿಕ ವೈವಿಧ್ಯತೆಯ ಉದ್ಯಾನವನ ನಿರ್ಮಿಸಲು ಬಯಸಿದರೆ, ಬಿಜೆಪಿ-ಜನತಾದಳ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಧಾರೆ ಎರೆಯಲು ಸಿದ್ಧವಾಗಿವೆ ಎಂದು ಸುರ್ಜೇವಾಲಾ ಗಮನಸೆಳೆದಿದ್ದಾರೆ.
ಇದೇ ವೇಳೆ, ಬೆಂಗಳೂರಿನ ಹೃದಯ ಭಾಗದಲ್ಲಿ ಜೀವ ವೈವಿಧ್ಯತೆ ಉದ್ಯಾನವನ ನಿರ್ಮಾಣಕ್ಕೆ ಮೋದಿ ಸರ್ಕಾರ ಮತ್ತು ಕುಮಾರಸ್ವಾಮಿ ವಿರೋಧ ಮಾಡುತ್ತಿರುವುದು ಹಾಗೂ ಅಡ್ಡಿಯಾಗುತ್ತಿರುವುದು ಏಕೆ? ಬಿಜೆಪಿ-ಜನತಾದಳ ಪಕ್ಷಗಳಿಗೆ ಬೆಂಗಳೂರಿನ ಜನರಿಗೆ ಹಸಿರು ಹೊದಿಕೆ ಮತ್ತು ಪರಿಶುದ್ಧ ಗಾಳಿ ನೀಡುವುದಕ್ಕಿಂತ ರಿಯಲ್ ಎಸ್ಟೇಟ್ ಮೂಲಕ ಹಣ ಗಳಿಸುವುದೇ ಮುಖ್ಯವಾಯಿತೇ? 1960 ರ ದಶಕದಲ್ಲಿ ಕಾರ್ಖಾನೆಗೆ ಭೂಮಿಯನ್ನು ನೀಡಲಾಗಿತ್ತು. ಹಲವು ವರ್ಷಗಳ ಹಿಂದೆಯೇ ಎಚ್.ಎಂ.ಟಿ ಕೈಗಾರಿಕೆ ಸ್ಥಗಿತಗೊಂಡಿದೆ. ಹೀಗಿರುವಾಗ ಈ ಭೂಮಿಯನ್ನು ಜೀವ ವೈವಿಧ್ಯತೆ ಉದ್ಯಾನವನಕ್ಕಾಗಿ ಕರ್ನಾಟಕದ ಜನರಿಗೆ ಏಕೆ ಹಿಂತಿರುಗಿಸಬಾರದು? ಇದು ಮೋದಿ ಸರ್ಕಾರದ ಬೂಟಾಟಿಕೆಯನ್ನು ಬಹಿರಂಗಪಡಿಸುವುದಿಲ್ಲದೇ ಬಿಜೆಪಿ-ಜನತಾದಳದ ದುಷ್ಟ ಸಂಬಂಧವನ್ನು ಜಗಜ್ಜಾಹಿರು ಮಾಡುತ್ತಿಲ್ಲವೇ? ಎಂದು ಸುರ್ಜೇವಾಲಾ ಅವರು ಹಲವು ಪ್ರಶ್ನೆಗಳನ್ನು ಬಿಜೆಪಿ-ಜೆಡಿಎಸ್ ನಾಯಕರ ಮುಂದಿಟ್ಟಿದ್ದಾರೆ.
As Bengaluru falls in a “concrete heat trap”, my meeting with Karnataka’s Forest Minister, Sh. @eshwar_khandre today brought out shocking facts on how Modi Govt and BJP-Janta Dal(S) are destroying Bangalore’s ecology and environment.
👉 In the 1960’s, Govt of Karnataka had… pic.twitter.com/mC3Bp9Q7Mi
— Randeep Singh Surjewala (@rssurjewala) July 16, 2025