ಮುಂಬೈ: ಚೀನಾದಿಂದ ಆಮದು ಮಾಡಿಕೊಳ್ಳುವ ಪ್ಲಾಸ್ಟಿಕ್ ಹೂವುಗಳನ್ನು ನಿಷೇಧಿಸುವ ನಿರ್ಧಾರವನ್ನು ಈ ವಾರ ಪ್ರಕಟಿಸಲಾಗುವುದು ಎಂದು ಮಹಾರಾಷ್ಟ್ರ ತೋಟಗಾರಿಕೆ ಸಚಿವ ಭರತ್ ಗೊಗವಾಲೆ ಬುಧವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಶಾಸಕ ಮಹೇಶ್ ಶಿಂಧೆ ಅವರು ವಿಧಾನಸಭೆಯಲ್ಲಿ ಈ ವಿಷಯದ ಕುರಿತು ರೈತರ ಆಂದೋಲನದ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೊಗವಾಲೆ, ಮಂಗಳವಾರ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಲಾಗಿದ್ದು, ಪ್ಲಾಸ್ಟಿಕ್ ಹೂವುಗಳ ಮೇಲೆ ಶಾಶ್ವತ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ನಿರ್ಧಾರವನ್ನು ಈ ವಾರ ಪ್ರಕಟಿಸಲಾಗುವುದು ಎಂದು ಪುನರುಚ್ಚರಿಸಿದರು.
ಕಳೆದ ವಾರ, ಶಾಸಕ ಶಿಂಧೆ ಈ ಬಗ್ಗೆ ವಿಧಾನಸಭೆಯಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸಿದ್ದರು. ಆ ವೇಳೆ ಇತರ ಶಾಸಕರು ಕೂಡಾ ಧ್ವನಿಗೂಡಿಸಿ, ಈ ಹೂವುಗಳಲ್ಲಿ ಬಳಸಲಾಗುವ ಹಾನಿಕಾರಕ ಬಣ್ಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ನೈಸರ್ಗಿಕ ಹೂವು ಬೆಳೆಗಾರರು ಪ್ಲಾಸ್ಟಿಕ್ ಹೂವುಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹಲವರು ಗಮನಸೆಳೆದಿದ್ದರು.