ಕಾವೇರಿ ಪ್ರವಾಹ ಎಚ್ಚರಿಕೆ: ತಮಿಳುನಾಡಿನ 11 ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ಸೂಚನೆ

ಚೆನ್ನೈ: ಕರ್ನಾಟಕದಲ್ಲಿ ಮುಂದುವರಿದಿರುವ ಭಾರೀ ಮಳೆಯಿಂದ ಅಣೆಕಟ್ಟೆಗಳು ವೇಗವಾಗಿ ತುಂಬುತ್ತಿದ್ದು, ಕಾವೇರಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಕೃಷ್ಣರಾಜ ಸಾಗರ (ಕೆಆರ್‌ಎಸ್) ಹಾಗೂ ಕಬಿನಿ ಅಣೆಕಟ್ಟುಗಳಿಂದ ಒಟ್ಟಾಗಿ 95,000 ಕ್ಯೂಸೆಕ್‌ ನೀರನ್ನು ಬಿಡುಗಡೆ ಮಾಡಲಾಗಿದ್ದು, ಇದರ ಪರಿಣಾಮವಾಗಿ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಭಾರೀ ಒಳಹರಿವು ದಾಖಲಾಗಿದೆ.

ಮೆಟ್ಟೂರು ಅಣೆಕಟ್ಟು ಶೀಘ್ರದಲ್ಲೇ ಅದರ ಪೂರ್ಣ ಸಾಮರ್ಥ್ಯವಾದ 120 ಅಡಿಗಳನ್ನು ತಲುಪುವ ನಿರೀಕ್ಷೆಯಿದ್ದು, ಬಳಿಕ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಜಲಸಂಪನ್ಮೂಲ ಇಲಾಖೆ ಕಾವೇರಿ ತೀರದ ಸೇಲಂ, ಈರೋಡ್, ನಾಮಕ್ಕಲ್, ಕರೂರ್, ಅರಿಯಲೂರು, ತಿರುಚಿ, ತಂಜಾವೂರು, ತಿರುವರೂರು, ಮೈಲಾಡುತುರೈ, ನಾಗಪಟ್ಟಣಂ ಹಾಗೂ ಕಡಲೂರು ಜಿಲ್ಲೆಗಳ ತಗ್ಗು ಪ್ರದೇಶಗಳಿಗೆ ಪ್ರವಾಹ ಎಚ್ಚರಿಕೆ ನೀಡಿದೆ.

ಸ್ಥಳೀಯ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳಿ ಜೀವ ಮತ್ತು ಆಸ್ತಿ ರಕ್ಷಿಸಿಕೊಳ್ಳುವಂತೆ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ.

Related posts